

ಮಂಗಳೂರು : ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಯೋಜನಾ ಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಹತ್ವದ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿವೆ, ಈ ಯೋಜನೆಗಳು ಪೂರ್ಣಗೊಂಡರೆ ಜಿಲ್ಲೆಯ ಸಂಪರ್ಕ ವ್ಯವಸ್ಥೆಯಲ್ಲಿ ಉತ್ತಮ ಪ್ರಗತಿ ಆಗಲಿದೆ ಎಂದರು.
ಬಿ.ಸಿ.ರೋಡ್ - ಅಡ್ಡಹೊಳೆ ಹೆದ್ದಾರಿ ಕಾಮಗಾರಿಯನ್ನು ಅಲ್ಲಲ್ಲಿ ನಡೆಸುವ ಮೊದಲು ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನಡೆಸಬೇಕು. ಬಿ.ಸಿ.ರೋಡ್‌ನಿಂದ ಮಾಣಿವರೆಗಿನ ಹೆದ್ದಾರಿ ಕಾಮಗಾರಿ ತೃಪ್ತಿಕರವಾಗಿಲ್ಲ. ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹೆದ್ದಾರಿ ಇಲಾಖೆಯು ತನ್ನ ಸಂಪೂರ್ಣ ಸಾಮರ್ಥ್ಯ ಬಳಸಿಕೊಂಡು ಕಾಮಗಾರಿ ನಿರ್ವಹಿಸಬೇಕು. ಜುಲೈ 5ರ ಒಳಗೆ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಇರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಂಸದರು ಸೂಚಿಸಿದರು.
ಕಾರ್ಕಳ - ಮೂಡುಬಿದಿರೆ - ಮಂಗಳೂರು ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಯಲ್ಲಿ ಸಮಸ್ಯೆ ಇರುವ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಮೂಡುಬಿದಿರೆ ಬೈಪಾಸ್ ನಿರ್ಮಾಣಕ್ಕೆ ಭೂಸ್ವಾಧೀನಗೊಂಡ ಜಮೀನನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಶೀಘ್ರವೇ ಹಸ್ತಾಂತರಿಸಬೇಕೆಂದು ಸಂಸದರು ಅಧಿಕಾರಿಗಳಿಗೆ ತಿಳಿಸಿದರು.
ಕೂಳೂರು ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಝ್ಮಿ ತಿಳಿಸಿದರು. ಇದೊಂದು ಗಂಭೀರ ವಿಷಯವಾಗಿದ್ದು, ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತರಲು ಸಂಸದರು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.
ಕೊಟ್ಟಾರ ಚೌಕಿ ಸರ್ವಿಸ್ ರಸ್ತೆ, ಕೆಪಿಟಿ ಓವರ್ ಪಾಸ್, ಪದುವಾ ಜಂಕ್ಷನ್, ನಂತೂರು ಮೇಲ್ಸೇತುವೆ ಬಗ್ಗೆ ಪರಿಶೀಲನೆ ನಡೆಸಿದ ಸಂಸದರು ಈ ಬಗ್ಗೆ ಶೀಘ್ರವೇ ಪ್ರತ್ಯೇಕ ಸಭೆ ಕರೆದು ಎಲ್ಲ ಗೊಂದಲವನ್ನು ಬಗೆಹರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ತಲಪಾಡಿ - ಹೆಜಮಾಡಿ ಸರ್ವಿಸ್ ರಸ್ತೆ :
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಲ್ಲಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ. ಆದರೆ ಪ್ರತಿನಿತ್ಯ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಗಳಾಗುತ್ತಿವೆ ಈ ನಿಟ್ಟಿನಲ್ಲಿ ತಲಪಾಡಿಯಿಂದ ಹೆಜಮಾಡಿವರೆಗೆ ಸಂಪೂರ್ಣವಾಗಿ ವ್ಯವಸ್ಥಿತವಾಗಿ ಸರ್ವೀಸ್ ರಸ್ತೆ ನಿರ್ಮಿಸುವ ಬಗ್ಗೆ ವರದಿ ತಯಾರಿಸಿ ಸಲ್ಲಿಸುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಪುಂಜಾಲಕಟ್ಟೆ - ಚಾರ್ಮಾಡಿ ಹೆದ್ದಾರಿ ಕಾಮಗಾರಿ ಸಂದರ್ಭ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ
ಮತ್ತು ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಬೇಕು ಎಂದು ಸಂಸದರ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಶಿವಪ್ರಸಾದ್ ಅಜಿಲ ಮಾತನಾಡಿ ಗುರುವಾಯನಕೆರೆಯಿಂದ ಉಜಿ ವರೆಗೆ 9 ಕಿ.ಮೀ ಸರ್ವಿಸ್ ರಸ್ತೆಯು ಯೋಜನೆಯಲ್ಲಿದೆ. ಪ್ರಸ್ತುತ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲಕರವಾಗುವಂತೆ ತಾತ್ಕಾಲಿಕ ವ್ಯವಸ್ಥೆಯನ್ನು ನಡೆಸಲಾಗಿದೆ. ಮಳೆಗಾಲದವರೆಗೆ ಈ ಹೆದ್ದಾರಿಯ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ಕೂಳೂರು ಹೊಸ ಸೇತುವೆ ಹಾಕಲಾದ ಮಣ್ಣನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್.ಕೆ. , ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಪಿ.ಶ್ರವಣ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಆನಂದ್ ಉಪಸ್ಥಿತರಿದ್ದರು.