ಕೊರಗರಿಗೆ ಭೂಮಿಯ ಹಕ್ಕು ನೀಡಿದ ತೃಪ್ತಿ: ಜಯಪ್ರಕಾಶ್​ ಹೆಗ್ಡೆ

udp-10-hegde 3
Published on

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಚಿವನಾಗಿದ್ದಾಗ ಈ ನೆಲದ ಅತ್ಯಂತ ಹಿಂದುಳಿದ ಜನಾಂಗ ಕೊರಗರಿಗೆ ಮಹಮ್ಮದ್​ ಪೀರ್​ ವರದಿ ಶಿಫಾರಿಸಿನಂತೆ ಭೂಮಿಯ ಹಕ್ಕು ನೀಡಿದ ತೃಪ್ತಿ ನನಗಿದೆ. ಜನಪ್ರತಿನಿಧಿಗಳಿಗೆ ಸಮ ಸಮಾಜ ನಿಮಾರ್ಣ ಮಾಡುವ ಚಿಂತನೆ ಹೊಂದಿರಬೇಕು ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್​ ಅಭ್ಯರ್ಥಿ ಜಯಪ್ರಕಾಶ್​ ಹೆಗ್ಡೆ ಹೇಳಿದರು.

ಬುಧವಾರ ಉಡುಪಿಯಲ್ಲಿ ನಡೆದ ಕಾರ್ಯಕರ್ತರ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾಯಕರ ಹೆಸರಿನಲ್ಲಿ ಮತಕೇಳುವುದನ್ನು ಬಿಟ್ಟು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತಯಾಚನೆ ಮಾಡಬೇಕು. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಸ್ಪರ್ಧೆ ಮಾಡುತ್ತಿಲ್ಲ. 10 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ನಾಯಕರ ಹೆಸರಿನಲ್ಲಿ ಗೆದ್ದು ಹೋದವರು ಎಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಉಡುಪಿ ಸೇರಿದ್ದಾಗ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಜಿಲ್ಲೆಯ ಜನರು ಮಂಗಳೂರಿಗೆ ಹೋಗಿ ಕಾಯುವ ಸ್ಥಿತಿ ಇತ್ತು. ಸ್ವತಂತ್ರ ಜಿಲ್ಲೆಯಾದ ಬಳಿಕ ಈ ಸಮಸ್ಯೆ ನಿವಾರಣೆಯಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್​, ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​, ವಕ್ತಾರ ಭಾಸ್ಕರ್​ ರಾವ್​ ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net