

ಶಿವಮೊಗ್ಗ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಭದ್ರಾವತಿಯ ವಿಐಎಸ್‌ಎಲ್(ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ)ಪುನರಾರಂಭಕ್ಕೆ ಅವಿರತ ಶ್ರಮ ವಹಿಸಿ ಬದ್ಧತೆಯಿಂದ ಜವಾಬ್ದಾರಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಾರ್ಯನಿರ್ವಹಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತಿಳಿಸಿದ್ದಾರೆ.
ಬಿ.ವೈ.ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ನಿರಂತರವಾಗಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಕಾರ್ಖಾನೆ ಆರಂಭಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಕೈಗಾರಿಕೆಗೆ ಪ್ರಾಮುಖ್ಯತೆ ನೀಡಿದ ಪರಿಣಾಮ ಕಾರ್ಖಾನೆ ಪುನರ್ ಆರಂಭವಾಗುತ್ತಿದೆ. ಇದೇ ತಿಂಗಳಿನಿಂದಲೇ ವಿಮಾನ ಸೇವೆ ಸಹ ಪ್ರಾರಂಭವಾಗಲಿದೆ. ಶಿವಮೊಗ್ಗ ಜಿಲ್ಲೆಯ ಕೈಗಾರಿಕೆ ಹಾಗೂ ಉದ್ಯಮದ ದೃಷ್ಟಿಯಿಂದ ಮಹತ್ತರ ಪ್ರಯೋಜನ ಸಿಗಲಿದೆ ಎಂದು ಸಂತಸ ವ್ಯಕ್ತಪಡಿಸಿದೆ.
ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಸ್ಥಾಪಿಸಲು ಪೂರಕ ವಾತಾವರಣವಿದ್ದು, ಹೊಸ ಕೈಗಾರಿಕೆಗಳನ್ನು ಜಿಲ್ಲೆಗೆ ತರುವುದರ ಮುಖಾಂತರ ಆರ್ಥಿಕ ಸದೃಢತೆಗೆ ಸಹಕರಿಸಬೇಕು. ದೇವಕಾತಿಕೊಪ್ಪದ ಕೈಗಾರಿಕಾ ವಸಾಹತು ಸಿದ್ಧಗೊಂಡಿದ್ದು, ಕೈಗಾರಿಕೆ ಪ್ರಾರಂಭಿಸಲು ಬೇಕಾಗಿರುವ ಅವಶ್ಯಕತೆಗಳನ್ನು ಪೂರೈಸಬೇಕು. ಕೈಗಾರಿಕೆ ಸ್ಥಾಪಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಎನ್.ಗೋಪಿನಾಥ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.