

ಶಿರಸಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ( ಎನ್ ಎಸ್ ಯು ಐ) ಕರ‍್ಯಕರ್ತರು ಸಂಸದ ಅನಂತಕುಮಾರ ಹೆಗಡೆ ಕಚೇರಿಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ಝೂ ವೃತ್ತದ ಬಳಿ ಇರುವ ಅವರ ಕಚೇರಿಯ ಎದುರು ಜಮಾಯಿಸಿದ ಇಪ್ಪತ್ತಕ್ಕೂ ಅಧಿಕ ಕಾರ್ಯಕರ್ತರು, ಅನಂತಕುಮಾರ ಹೆಗಡೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರ ಬೇಧ ನೀತಿ ಅನುಸರಿಸುತ್ತಿದೆ. ರಾಜ್ಯಕ್ಕೆ ಅನ್ಯಾಯವಾಗಿದ್ದರೂ ನಮ್ಮ ಬಿಜೆಪಿ ಸಂಸದರು ಮಾತನಾಡುತ್ತಿಲ್ಲ, ಕೇಂದ್ರದ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ಸಂಸದ ಅನಂತಕುಮಾರ ಹೆಗಡೆ ನಿರ್ಲಕ್ಷ್ಯ ನೀತಿಯಿಂದಾಗಿ ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದಿದೆ. ಹಲವು ವರ್ಷಗಳ ಕಾಲ ಅವರು ಸಂಸದರಾಗಿದ್ದರೂ ಜಿಲ್ಲೆಗೆ ಏನೂ ಕೊಡುಗೆ ನೀಡಿಲ್ಲ. ಈಗ ಚುನಾವಣೆ ಎದುರು ಪ್ರತ್ಯಕ್ಷವಾಗಿ ಸಮಾಜ ಒಡೆಯುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇಂದ್ರದಿAದ 1800 ಕೋಟಿ ರೂ. ರಾಜ್ಯಕ್ಕೆ ಬರಬೇಕಿತ್ತಾದರೂ ಜನರ ಪರವಾಗಿ ಅನಂತಕುಮಾರ ಹೆಗಡೆ ಕೇಂದ್ರವನ್ನು ಪ್ರಶ್ನಿಸಿಲ್ಲ ಎಂದು ಆರೋಪಿಸಿದರು. ಎನ್ ಎಸ್ ಯು ಐ ಪ್ರಮುಖರಾದ ವಿಶ್ವ ಮಡಿವಾಳ, ಪ್ರಸನ್ನ ಶೆಟ್ಟಿ ಇತರರಿದ್ದರು.
ಇದನ್ನೂ ಓದಿ: ಮೀನು ಹಿಡಿಯಲು ತೆರಳಿದ್ದ ತಂದೆ -ಮಗ ಸಾವು