ಸಿನಿಮಾಗಳು ಹೊಸ ಬದಲಾವಣೆ ತರುವಂತಿರಬೇಕು

Movies should be revolutionary
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಾಂಸ್ಕೃತಿಕ ಜನೋತ್ಸವದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ನಿರ್ದೇಶಕ ಶಶಾಂಕ ಸೋಗಲ್ ಮಾತನಾಡಿದರು. ನಟ ಶಿಶಿರ ಬೈಕಾಡಿ, ಕಾವೇರಿ ರಜಪೂತ, ಶಿವಬಾಳಮ್ಮ ಕೊಂಡಗೂಳಿ ಇದ್ದಾರೆ.
Published on

ವಿಜಯಪುರ: ವೈವಿಧ್ಯತೆಯ ಮಧ್ಯೆ ಸಾಮರಸ್ಯದ ಬದುಕಿನ ಮುನ್ನೋಟ ಪ್ರತಿನಿಧಿಸುವ ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ನಮ್ಮ ದೈನಂದಿನ ಬದುಕಿನ ನಿಜ ವಾಸ್ತವ ತೋರಿಸುತ್ತದೆ ಎಂದು ನಿರ್ದೇಶಕ ಶಶಾಂಕ ಸೋಗಲ್ ಅಭಿಪ್ರಾಯಪಟ್ಟರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆವಿಷ್ಕಾರ, ಎಐಡಿಎಸ್‌ಒ, ಎಐಡಿವೈಒ ಮತ್ತು ಎಐಎಂಎಸ್‌ಎಸ್ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ 13ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವದಲ್ಲಿ ಭಾನುವಾರ ನಡೆದ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ಪ್ರದರ್ಶನದ ನಂತರದ ಸಂವಾದದಲ್ಲಿ ಅವರು ಮಾತನಾಡಿದರು.

ಪೂರ್ಣಚಂದ್ರ ತೇಜಸ್ವಿಯವರ ಆಶಯ ಈಗಲೂ ಪ್ರಸ್ತುತವಾಗಿದೆ. ನಮ್ಮ ಸಿನಿಮಾ ಕೇವಲ ಮನರಂಜನೆ ಅಷ್ಟೇ ಅಲ್ಲದೇ, ಜನರಿಗೆ ಒಂದು ಉತ್ತಮ ಸಂದೇಶ ತಲುಪಿಸುವ ಉದ್ದೇಶ ಹೊಂದಿದೆ.

‘ಡೇರ್ ಡೆವಿಲ್ ಮುಸ್ತಫಾ’ ಕಥೆಯು ಜನರು ಪರಸ್ಪರ ಸಾಮರಸ್ಯದಿಂದ ಬದುಕುವ ಸಂದೇಶ ಕೊಡಲು ಈ ಸಿನಿಮಾ ತೆಗೆಯಲಾಗಿದೆ. ನನ್ನ ಸಿನೆಮಾಗಳಲ್ಲಿ ಹೀರೋ, ವಿಲನ್‌ಗಳು ಇರುವುದಿಲ್ಲ ಜನರಿಗೆ ವಿಚಾರಗಳು ತಲುಪಿಸುವ ನಿಟ್ಟಿನಲ್ಲಿ ನನ್ನ ಸಿನೆಮಾಗಳು ಇರುತ್ತವೆ ಎಂದರು.

ಸಿನಿಮಾಗಳು ಜನತೆಯ ನೈಜ ಸಮಸ್ಯೆಗಳನ್ನು ಚಿತ್ರಿಸುವುದರ ಜತೆಗೆ ಸಮಾಜದಲ್ಲಿ ಹೊಸ ಬದಲಾವಣೆ ನಿರೀಕ್ಷಿಸುವಂತಿರಬೇಕು. ಈ ಸಿನೆಮಾ ಅಂತಹ ಸೌಹಾರ್ದತೆ ಜಾಗೃತಗೊಳಿಸುವ ಕಾರ್ಯ ಮಾಡಿದೆ ಎಂದರು.

‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾದ ನಟ ಶಿಶಿರ ಬೈಕಾಡಿ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕ ಶಿವಬಾಳಮ್ಮ ಕೊಂಡಗೂಳಿ ಅಧ್ಯಕ್ಷತೆ ವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net