

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ದೇವನಹಳ್ಳಿ ತಾಲೂಕು ಬುಲ್ಲಹಳ್ಳಿಯ ಟಿಪ್ಪರ್ ಲಾರಿ ಚಾಲಕ ರಾಮಕೃಷ್ಣ ಕನ್ನಡ ಮೇರುನಟ ಡಾ.ರಾಜ್‌ಕುಮಾರ್ ಅಪ್ಪಟ ಅಭಿಮಾನಿ. ರಾಜ್‌ಕುಮಾರ್ ಮೇಲಿಟ್ಟಿರುವ ಅಭಿಯಾನದ ದ್ಯೋತಕವಾಗಿ ತನ್ನ ಲಾರಿಯ ಮೇಲೆ ರಾಜ್ ಅಭಿನಯಿಸಿದ 206 ಚಿತ್ರಗಳ ಹೆಸರನ್ನು ಕ್ರಮವಾಗಿ ಬರೆಸಿದ್ದಾರೆ. ಇದು ಕನ್ನಡಾಭಿಮಾನಿಗಳ ಗಮನ ಸೆಳೆಯುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
69 ನೇ ಕನ್ನಡ ರಾಜ್ಯೋತ್ಸವದ ಈ ಅಪೂರ್ವಗಳಿಗೆಯಲ್ಲಿ ’ವಿಜಯವಾಣಿ’ಯೊಂದಿಗೆ ರಾಮಕೃಷ್ಣಪ್ಪ ರಾಜ್‌ಕುಮಾರ್ ಕುರಿತಾದ ಅಭಿಮಾನದ ಬಗ್ಗೆ ಮಾತನಾಡಿದ್ದಾರೆ. 53 ವರ್ಷದ ಈತ ಮೂಲತ ರೈತರಾಗಿದ್ದಾರೆ, ಜತೆಗೆ ಟಿಪ್ಪರ್ ಲಾರಿ ಚಾಲಕನಾಗಿ ಅಣ್ಣಾವ್ರ ಸಿನಿಮಾ ಗೀತೆಯಂತೆ ದುಡಿಮೆಯ ನಂಬಿ ಬದುಕು ಎಂಬಂತೆ ಜೀವನ ನಡೆಸುತ್ತಿದ್ದಾರೆ. ಬಾಲ್ಯದಿಂದಲೂ ಅಣ್ಣಾವ್ರ ಅಪ್ಪಟ ಅಭಿಮಾನಿ ನಾನು. ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ಮಣ್ಣಿನಮಗ ಚಿತ್ರನದ ಚಿತ್ರೀಕರಣದ ವೇಳೆ ನಾನು 8 ತಿಂಗಳ ಮಗುವಂತೆ, ಆಗ ನಮ್ಮ ತಾಯಿ ಚಿತ್ರೀಕರಣ ನೋಡಲು ಹೋಗಿದ್ದಾಗ ಭಗವಂತ ಕೈ ಕೊಟ್ಟ ಗೀತೆಯ ಸನ್ನಿವೇಶದಲ್ಲಿ ನನ್ನ ತಾಯಿ ನನ್ನನ್ನು ಅಶ್ವತ್ಥಕಟ್ಟೆ ಬಳಿ ತೊಡೆಯ ಮೇಲೆ ಮಲಗಿಸಿಕೊಂಡಿರುವುದನ್ನು ಚಿತ್ರೀಕರಿಸಿಕೊಂಡಿದ್ದರಂತೆ ಹಾಗಾಗಿ ನಾನು ಬಾಲ್ಯದಲ್ಲಿಯೇ ಅಣ್ಣಾವ್ರ ಚಿತ್ರದಲ್ಲಿ ಅಭಿನಯಿಸಿದ್ದೆ ಎಂಬ ಹೆಮ್ಮೆ ಇದೆ ಎಂದು ಹೇಳುತ್ತಾರೆ. ಬಂಗಾರದ ಮನುಷ್ಯ ಸಿನಿಮಾದಿಂದ ನನ್ನ ಜೀವನದ ಹಾದಿಗೆಯೇ ಬದಲಾಯಿತು. ಅವರ ಎಲ್ಲ ಸಿನಿಮಾಗಳಿಂದ ಒಂದೊಂದು ನೀತಿ ಅಳವಡಿಕೊಂಡು ಬಂದಿದ್ದೇನೆ ಎನ್ನುತ್ತಾರೆ.
ಲಗ್ನಪತ್ರಿಕೆಯಲ್ಲಿ ಸಹಿ: ನಮ್ಮ ಪಕ್ಕದ ಗ್ರಾಮ ಕೋರಮಂಗಲದ ಬಯಲು ಬಂಧಿಖಾನೆ ಬಳಿ ದೇವತಾಮನುಷ್ಯ ಚಿತ್ರೀಕರಣಕ್ಕೆ ಬಂದ ಸಂದರ್ಭದಲ್ಲಿ ನನ್ನ ಬಳಿ ಇದ್ದ ರಾಜ್‌ಕುಮಾರ್ ಅವರ ಮದುವೆಯ ಲಗ್ನಪತ್ರಿಕೆ ತೋರಿಸಿ ಅವರ ಆಶೀರ್ವಾದ ಪಡೆದು ಅದಕ್ಕೆ ಹಸ್ತಾಕ್ಷರ ಹಾಕಿಸಿಕೊಂಡಿದ್ದೇನೆ.ಅದನ್ನು ನಮ್ಮ ಮನೆಯಲ್ಲಿ ಫ್ರೇಮ್ ಹಾಕಿಸಿಕೊಂಡು ಇಟ್ಟುಕೊಂಡಿದ್ದೆನೆ. ಅಣ್ಣಾವ್ರ ಸಿನಿಮಾ ಮಾತ್ರವಲ್ಲ ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆ ವಿಚಾರದಲ್ಲಿ ಗಟ್ಟಿ ದನಿ ಎತ್ತುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಚಿತ್ರಗಳ ಹೆಸರುಗಳನ್ನು ಲಾರಿಯ ಮೇಲೆ ಬರೆಸಿದ್ದಾನೆ ಎನ್ನುತ್ತಾರೆ.