ದೇಗುಲಗಳ ಆಸ್ತಿ ವಶಕ್ಕೆ ಪಡೆಯುವ ಆಂದೋಲನ ಜಾರಿ

11mlk1
ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದ ಜಮೀನಿಗೆ ಡಾ.ಎಂ.ವಿ.ವೆಂಕಟೇಶ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಿವಾನಂದಮೂರ್ತಿ, ಶ್ರೀನಿವಾಸ್ ಇದ್ದರು.
Published on

ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ವೆಂಕಟೇಶ್ ಮಾಹಿತಿ

ಮೇಲುಕೋಟೆ : ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಿಗೆ ಸೇರಿದ ಜಾಗಗಳನ್ನು ಮರಳಿ ವಶಕ್ಕೆ ಪಡೆಯುವ ಆಂದೋಲನವನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ವೆಂಕಟೇಶ್ ತಿಳಿಸಿದರು.

ಮೇಲುಕೋಟೆಯಲ್ಲಿ ದೇವಾಲಯಕ್ಕೆ ಸೇರಿದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಮಾತನಾಡಿ, ರಾಜ್ಯ ಸರ್ಕಾರದ ತೀರ್ಮಾನದಂತೆ ದೇಗುಲಗಳ ಜಮೀನುಗಳನ್ನು ಆಯಾ ದೇವಾಲಯದ ಹೆಸರಿಗೆ ಇಂಡೀಕರಿಸುವ ಆಂದೋಲನವನ್ನು ಮಾಡಲಾಗುತ್ತಿದೆ. ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮ ಇದಾಗಿದ್ದು, ಇದಕ್ಕಾಗಿಯೇ ಇಲಾಖೆಯಲ್ಲಿ ಕಾನೂನು ವಿಭಾಗ ಆರಂಭಿಸಲಾಗಿದೆ. ಈವರೆಗೆ 12 ಸಾವಿರ ಎಕರೆ ಭೂಮಿಯನ್ನು ವಿವಿಧ ದೇಗುಲಗಳ ಹೆಸರಿಗೆ ಇಂಡೀಕರಿಸುವ ಕಾರ್ಯ ಮಾಡಲಾಗಿದೆ ಎಂದರು.

ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಜಮೀನುಗಳನ್ನು ದೇವಾಲಯದ ಹೆಸರಿಗೆ ಇಂಡೀಕರಿಸಬೇಕು. ದೇವಾಲಯದ ಜಮೀನಿನನ್ನು ಬೇರೆ ಯಾರಿಗಾದರೂ ಖಾತೆ ಮಾಡಿಕೊಟ್ಟಿದ್ದರೆ ತಕ್ಷಣ ರದ್ದು ಮಾಡಬೇಕು. ಈ ನಿಟ್ಟಿನಲ್ಲಿ ಮೇಲುಕೋಟೆ ಗ್ರಾಮ ಪಂಚಾಯಿತಿಗೆ ತಕ್ಷಣವೇ ಪತ್ರ ಬರೆಯಿರಿ. ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಸೇರಿದ ಎಲ್ಲ ಜಮೀನುಗಳು ದೇವಾಲಯದ ಹೆಸರಿಗೆ ಒಂದು ವಾರದೊಳಗೆ ಖಾತೆಯಾಗಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಜಮೀನುಗಳನ್ನು ಇಂಡೀಕರಿಸಿದ ಮಾಹಿತಿಯನ್ನೂ ತಕ್ಷಣ ನೀಡಬೇಕು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರಿಗೆ ಸೂಚನೆ ನೀಡಿದರು.

ಮೇಲುಕೋಟೆಯಲ್ಲಿ ದೇವಾಲಯಕ್ಕೆ ಸೇರಿದ ಜಮೀನನ್ನು ಉಳುವವವನಿಗೆ ಭೂಮಿ ಯೋಜನೆಯಡಿ ಖಾತೆ ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಇಂತಹ ಜಮೀನುಗಳನ್ನು ದೇವಾಲಯದ ವಶಕ್ಕೆ ಪಡೆಯಬೇಕಾಗಿದೆ. ಇಂತಹ ಖಾತೆಗಳನ್ನು ರದ್ದುಮಾಡಿ ಜಮೀನುಗಳನ್ನು ಚೆಲುವನಾರಾಯಣನ ಆಸ್ತಿಯಾಗಿ ಉಳಿಸಿಕೊಳ್ಳಲು ಸಿಎಟಿಯಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ದೇವಾಲಯದ ಜಮೀನುಗಳನ್ನು ಅನ್ಯ ಉದ್ದೇಶಗಳಿಗೆ ಖಾತೆ ಮಾಡಿಕೊಟ್ಟಿದ್ದರೆ ಅಂತಹ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಇಂತಹ ಜಮೀನುಗಳಿದ್ದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖಾತೆ ರದ್ದುಮಾಡಿ ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ಉಪ ತಹಸೀಲ್ದಾರ್ ರಾಜೇಶ್, ಗ್ರಾಮಾಧಿಕಾರಿ ರಮೇಶ್, ಮೇಲುಕೋಟೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಜಮೀನುಗಳ ಬಗ್ಗೆ ಮಾಹಿತಿ ನೀಡಿ : ಯಾವುದೇ ದೇವಾಲಯಗಳ ಜಮೀನುಗಳು ಪರಭಾರೆಯಾಗಿದ್ದರೆ ಧಾರ್ಮಿಕ ದತ್ತಿ ಇಲಾಖೆಗೆ ದಾಖಲೆ ಸಹಿತವಾಗಿ ದೂರು ನೀಡಿದರೆ ಮತ್ತೆ ದೇವಾಲಯದ ವಶಕ್ಕೆ ಪಡೆಯಲಾಗುತ್ತದೆ. ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನುಗಳು ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ಮಾಹಿತಿ ನೀಡಬಹುದು. ಚೆಲುವನಾರಾಯಣಸ್ವಾಮಿಗೆ ಸೇರಿದ ಜಮೀನು ಮೇಲುಕೋಟೆ, ಕೆ.ಆರ್.ಪೇಟೆ ತಾಲೂಕು ಮೈಲನಹಳ್ಳಿ ಹಾಗೂ ಮೈಸೂರು ಕೆಸರೆ ಬಳಿಯಿರುವುದು ತಿಳಿದುಬಂದಿದ್ದು, ದೇವಾಲಯದ ಹೆಸರಿಗೆ ಸೇರಿಸುವ ಕಾರ್ಯ ನಡೆದಿದೆ ಎಂದು ಆಯುಕ್ತ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಇದೇ ವೇಳೆ ಸಂಸ್ಕೃತ ಸಂಶೋಧನಾ ಸಂಸ್ಥೆಗೆ ಮಂಜೂರು ಮಾಡಿದ್ದ ಜಮೀನನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಿದರು.

ಚೆಲುವನಿಗೆ ಬೆಳ್ಳಿ ರಥ : ಬೆಳ್ಳಿ ರಥ ನಿರ್ಮಾಣದ ಬಗ್ಗೆ ಚರ್ಚಿಸಿದ ಆಯುಕ್ತ ಡಾ.ವೆಂಕಟೇಶ್, ಚೆಲುವನಾರಾಯಣಸ್ವಾಮಿಗೆ ಬೆಳ್ಳಿಯರಥ ಸಮರ್ಪಿಸಬೇಕೆಂಬ ಬಹುದಿನಗಳ ಬೇಡಿಕೆ ಇದೆ. ಪ್ರತ್ಯೇಕ ಖಾತೆ ತೆರೆಯಲು ಧಾರ್ಮಿಕ ದತ್ತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ಅನುಮತಿ ನೀಡಲಾಗುತ್ತದೆ. ಭಕ್ತರು,ದಾನಿಗಳು ಈ ಮಹಾಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಿ ರಥನಿರ್ಮಾಣಕ್ಕೆ ಚಾಲನೆ ನೀಡಬಹುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಹಾಗೂ ದೇಗುಲದ ಆಡಳಿತಾಧಿಕಾರಿ ಶ್ರೀನಿವಾಸ್‌ಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net