ತಾಲೂಕು ಹೋರಾಟದ ಹಾದಿ ಸುದೀರ್ಘ

dj ppura taluk
Published on

ಚಳ್ಳಕೆರೆ: ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದ ಪರಶುರಾಮಪುರ ರಾಜ್ಯದ ಮಧ್ಯಕರ್ನಾಟಕದ ಹೋಬಳಿ ಎಂಬ ಖ್ಯಾತಿ ಪಡೆದಿದೆ. ಜತೆಗೆ 1.15 ಲಕ್ಷ ಜನಸಂಖ್ಯೆ ಇದೆ.

ಇದರ ವ್ಯಾಪ್ತಿಯಲ್ಲಿ 10 ಗ್ರಾಪಂಗಳಿದ್ದು, 60 ಕಂದಾಯ ಗ್ರಾಮಗಳಿವೆ. ಪ್ರಥಮ ದರ್ಜೆ ಕಾಲೇಜು, ವೃತ್ತಿಪರ ತರಬೇತಿ ಸಂಸ್ಥೆಗಳು, ಇಂದಿರಾ ವಸತಿ ಶಾಲೆ, ಕೃಷಿ ಇಲಾಖೆ, ಆರೋಗ್ಯ ಸಮುದಾಯ ಕೇಂದ್ರ, ಬಿಎಸ್‌ಎನ್‌ಎಲ್ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್, ಕೃಷಿ ಸಹಕಾರ ಸಂಘ, ಪೊಲೀಸ್ ಠಾಣೆ ಸೇರಿ ಅಗತ್ಯ ಸರ್ಕಾರಿ ಕಚೇರಿಗಳು ಈಗಾಗಲೇ ಸ್ಥಾಪಿತವಾಗಿವೆ.

ಇಷ್ಟೆಲ್ಲ ಸೌಲಭ್ಯಗಳಿದ್ದರೂ ತಾಲೂಕು ಭಾಗ್ಯ ಮಾತ್ರ ಇಲ್ಲಿಯವರೆಗೂ ಲಭಿಸಿಲ್ಲ. ಪರಶುರಾಮಪುರದಿಂದ ಬೆಂಗಳೂರು, ಅನಂತಪುರ, ದಾವಣಗೆರೆ, ಮೈಸೂರು ಮತ್ತು ಶಿವಮೊಗ್ಗ ಭಾಗಕ್ಕೆ ದಿನಕ್ಕೆ 80 ರಿಂದ 100 ಬಸ್‌ಗಳು ಸಾಗುವ ಕೇಂದ್ರ ಸ್ಥಳವಾಗಿದೆ.

ನೂತನ ಇಲಾಖೆಗಳ ಸ್ಥಾಪನೆ ಮತ್ತು ವಸತಿ ಸೌಕರ್ಯಗಳಿಗೆ ಸರ್ಕಾರಿ ಗೋಮಾಳ ಭೂಮಿಯೂ ಇಲ್ಲಿ ಸಾಕಷ್ಟು ಲಭ್ಯತೆ ಇದೆ.

ಹೋರಾಟದ ಹಾದಿ: ಎರಡ್ಮೂರು ದಶಕದಿಂದಲೂ ಹೋರಾಟ ನಿರಂತರವಾಗಿ ನಡೆಯುತ್ತಿದ್ದು, ಹಲವು ವರದಿಗಳು ಪೂರಕವಾಗಿವೆ. 2008ರಲ್ಲಿ ಕೆಲ ಹೋರಾಟಗಾರರು 40 ಬಸ್‌ಗಳಲ್ಲಿ ವಿಧಾನಸೌಧ ಚಲೋ ನಡೆಸಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮನವಿ ಸಲ್ಲಿಸಿದ್ದರು.

ಜತೆಗೆ ತಾಲೂಕು ಮತ್ತು ಜಿಲ್ಲಾ ಕಚೇರಿ ಬಳಿ ಧರಣಿ, ರಸ್ತೆ ತಡೆ, ಅಂಚೆ ಪತ್ರ ಚಳವಳಿ ಹೀಗೆ ಸಾಲು-ಸಾಲು ಪ್ರತಿಭಟನೆಗಳು ನಡೆದಿವೆ.

ಪಂಜು, ಅರೆಬೆತ್ತಲೆ ಮೆರವಣಿಗೆ ನಡೆಸಲಾಗಿದೆ. ತಿರುಪತಿ, ಮಂತ್ರಾಲಯ, ಕಟೀಲು ದುರ್ಗಾಪರಮೇಶ್ವರಿ ಮತ್ತು ಧರ್ಮಸ್ಥಳ ಕ್ಷೇತ್ರಗಳಿಗೆ ಪಾದಯಾತ್ರೆ ನಡೆಸಿ ಮೀಸಲು ಹರಕೆ ಸಲ್ಲಿಸಲಾಗಿದೆ.

ಮತ್ತೊಮ್ಮೆ ಚಳವಳಿ: ಪರಶುರಾಮಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಮತ್ತೊಂದು ಹಂತದ ಹೋರಾಟಕ್ಕೆ ಮುನ್ನುಡಿ ಬರೆಯಲು ಹಲವು ಸಂಘಟನೆಗಳು ಮುಂದಾಗಿವೆ.

ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಆ.17ರಂದು ಚಳ್ಳಕೆರೆ ನಗರದಲ್ಲಿ ಚಳುವಳಿ ಹಮ್ಮಿಕೊಂಡಿದೆ. ಈ ಮಧ್ಯೆ ಕೆಲ ಯುವಕರು ಬೇಡಿಕೆ ಈಡೇರಿಕೆಗಾಗಿ ತಿರುಪತಿಗೆ ಪಾದಯಾತ್ರೆ ಹೊರಡುವ ಸಿದ್ಧತೆ ಕೈಗೊಂಡಿದ್ದಾರೆ.

ಪರಶುರಾಮಪುರ ಹೋಬಳಿಯನ್ನು ತಾಲೂಕನ್ನಾಗಿ ಘೋಷಿಸಬೇಕು. ಭೌಗೋಳಿಕವಾಗಿ, ಜನಸಂಖ್ಯೆ ಆಧಾರಿತವಾಗಿ ಮತ್ತು ಗಡಿಭಾಗದ ಆದ್ಯತೆ ಮೇರೆಗೆ ತಾಲೂಕಾಗಿಸಬೇಕೆಂಬ ಪ್ರಸ್ತಾಪವಿದೆ. ಸಂಬಂಧಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟು, ಶೀಘ್ರದಲ್ಲೇ ಘೋಷಣೆಗೆ ಪ್ರಯತ್ನ ಮಾಡಲಾಗುವುದು.ಟಿ. ರಘುಮೂರ್ತಿ, ಶಾಸಕರು, ಚಳ್ಳಕೆರೆ

ಹೋಬಳಿ ಜನತೆಗೆ ಸರ್ಕಾರಿ ಸೌಲಭ್ಯ ಪಡೆಯಲು ತಾಲೂಕು ಕೇಂದ್ರವಾಗಿ ಘೋಷಿಸಬೇಕಿದೆ. 30 ವರ್ಷಗಳಿಂದ ಆಡಳಿತ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಆ.17ರಂದು ನಗರದ ನೆಹರು ವೃತ್ತದಲ್ಲಿ ಚಳವಳಿ ನಡೆಸಲು ನಿರ್ಧರಿಸಲಾಗಿದ್ದು, ಸಿದ್ಧತೆ ಮಾಡಿಕೊಳ್ಳಲಾಗಿದೆ.ಸೋಮಗುದ್ದು ರಂಗಸ್ವಾಮಿ, ರೈತ ಹೋರಾಟಗಾರ

ರೈತ ಸಂಘಟನೆ ಚಳವಳಿಯಲ್ಲಿ ಹೋಬಳಿ ಜನತೆ ಸಕ್ರಿಯವಾಗಿ ಭಾಗವಹಿಸಲಿದ್ದೇವೆ. ಪರಶುರಾಂಪುರ ತಾಲೂಕಾಗಿ ಘೋಷಣೆ ಆಗಬೇಕಾಗಿದೆ. ಈ ಬೇಡಿಕೆ ಈಡೇರಿಕೆಗಾಗಿ 450 ಕಿ.ಮೀ. ದೂರದ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಶೀಘ್ರದಲ್ಲೇ ಪಾದಯಾತ್ರೆ ಹಮ್ಮಿಕೊಳ್ಳಲಿದ್ದೇವೆ.ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಜಿಲ್ಲಾಧ್ಯಕ್ಷ, ನವಜಾಗೃತಿ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net