

ಮಡಿಕೇರಿ: ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮ ಪಡಿಸಲು ಶಿಕ್ಷಣ ಇಲಾಖೆಯು ದಿಟ್ಟ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಜತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಹೇಳಿದರು.
ಕೊಡಗು ಜಿಲ್ಲಾ ಪಂಚಾಯತಿಯ ಸಹಯೋಗದೊಂದಿಗೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸೋಮವಾರ ನಗರದ ಸಂತ ಮೈಕಲ್ಲರ ಶಾಲೆಯಲ್ಲಿ ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಏರ್ಪಡಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಕುರಿತು ಆತ್ಮವಿಶ್ವಾಸ ಹಾಗೂ ಕಲಿಕಾ ಪ್ರೇರೇಪಣೆ ಮೂಡಿಸಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು ಹೆಜ್ಜೆ ಹಾಕುವ ಮೊದಲ ಪ್ರಮುಖ ಘಟ್ಟವಾಗಿದ್ದು, ಇಲ್ಲಿನ ಸಾಧನೆ ಜೀವನದ ಎಲ್ಲ ಹಂತಗಳಲ್ಲೂ ಪ್ರಭಾವ ಬೀರುತ್ತದೆ ಎಂದರು.
ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ೯ನೇ ಸ್ಥಾನ ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶವು ರಾಜ್ಯ ಮಟ್ಟದಲ್ಲಿ ೫ನೇ ಸ್ಥಾನದೊಳಗೆ ಫಲಿತಾಂಶ ಪಡೆಯಲು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು. ಪಾಲಕರು ಮತ್ತು ಮಕ್ಕಳಲ್ಲಿ ಸಂತಸದ ಭಾವನೆ ಮೂಡಿಸುವ ಮೂಲಕ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿ ಮನೋಸ್ಥೈರ್ಯ ಬೆಳೆಸಿ ಪರೀಕ್ಷೆಗೆ ಸಿದ್ಧಗೊಳಿಸಬೇಕು ಎಂದು ಚಂದ್ರಕಾಂತ್ ಸಲಹೆ ಮಾಡಿದರು.
ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಯಾರಿಕೆಗೆ ಸಿದ್ಧತೆ ಬಗ್ಗೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಲು ಮತ್ತು ಪರೀಕ್ಷೆ ಬಗ್ಗೆ ಭಯ ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ಹಾಗೂ ಕಲಿಕಾ ಪ್ರೇರಣೆ ಮೂಡಿಸಬೇಕು. ಶೈಕ್ಷಣಿಕ ಗುಣಮಟ್ಟ ಪ್ರಗತಿ ಸಾಧಿಸಲು ಮಕ್ಕಳಿಗೆ ವಿಶೇಷ-ವಿನೂತನ ಕಾರ್ಯಕ್ರಮ ನೀಡುವ ಉದ್ದೇಶದಿಂದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮಾಡಬೇಕು ಎಂಬ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಹೊಸ ವಿಧಾನಗಳ ಕುರಿತು ಮಾಹಿತಿ ನೀಡಿದ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಎಂ.ಮಹದೇವಸ್ವಾಮಿ, ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮಕ್ಕಳ ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ಕುರಿತು ಪಾಲಕರೊಂದಿಗೆ ಸಮಾಲೋಚನೆ ನಡೆಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಕ್ರಮ ವಹಿಸಬೇಕು ಎಂದು ವಿವರಿಸಿದರು.
ಡಯಟ್‌ನ ಹಿರಿಯ ಉಪನ್ಯಾಸಕಿ ಗೀತಾ, ಉಪನ್ಯಾಸಕರಾದ ಶಿವಕುಮಾರ್, ಎಸ್.ಪಿ.ಮಹಾದೇವರವರು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಾಲೆಯ ವತಿಯಿಂದ ಕೈಗೊಳ್ಳಬೇಕಾದ ಶೈಕ್ಷಣಿಕ ಕ್ರಮಗಳ ಕುರಿತು ವಿವರಿಸಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಜವಾಬ್ದಾರಿ ಹಾಗೂ ಸಮನ್ವಯತೆಯಿಂದ ಕೆಲಸ ನಿರ್ವಹಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಸಾಧ್ಯ ಎಂದರು.
ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿಗಳಾದ ಎಂ.ಕೃಷ್ಣಪ್ಪ, ಸೌಮ್ಯ ಪೊನ್ನಪ್ಪ, ವಿರಾಜಪೇಟೆ ಬಿಇಒ ಎಂ.ಪ್ರಕಾಶ್, ಸೋಮವಾರಪೇಟೆ ಪ್ರಭಾರ ಬಿಇಒ ಎಂ.ವಿ.ಮಂಜೇಶ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಕೆ.ಪಿ.ಗುರುರಾಜ್, ಜಿ.ಎಂ.ಹೇಮಂತ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು, ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುಳಾ ಚಿತ್ತಾಪುರ ಕಾರ್ಯಕ್ರಮ ನಿರ್ವಹಿಸಿದರು.