ನಾಡು-ನುಡಿಯ ವಿಚಾರದಲ್ಲಿ ಒಗ್ಗಟ್ಟಿನಿಂದ ಮುನ್ನುಗ್ಗಿ

ನಾಡು-ನುಡಿಯ ವಿಚಾರದಲ್ಲಿ ಒಗ್ಗಟ್ಟಿನಿಂದ ಮುನ್ನುಗ್ಗಿ
Published on

ಪಿರಿಯಾಪಟ್ಟಣ: ಕನ್ನಡ ನಾಡು ನುಡಿಯ ವಿಚಾರಗಳು ಬಂದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನುಗ್ಗಬೇಕು, ಆಗ ಮಾತ್ರ ಕನ್ನಡ ಭಾಷೆ, ಸಂಸ್ಕೃತಿ ಉಳಿಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಅಭಿಪ್ರಾಯಪಟ್ಟರು.

ಸುವರ್ಣ ಕರ್ನಾಟಕ 50ರ ಸಂಭ್ರಮದ ಅಂಗವಾಗಿ ಇತ್ತೀಚೆಗೆ ಪಿರಿಯಾಪಟ್ಟಣಕ್ಕೆ ಆಗಮಿಸಿದ ಜ್ಯೋತಿ ರಥವನ್ನು ಸ್ವಾಗತಿಸಿ ಮಾತನಾಡಿದರು. ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡಾಭಿಮಾನವನ್ನು ಬಿತ್ತುವ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿಯಾಗಿದ್ದು, ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ದೊರಕಬೇಕಿದೆ, ಈ ನಿಟ್ಟಿನಲ್ಲಿ ನಮ್ಮನ್ನು ಆಳುವ ಸರ್ಕಾರಗಳು ಚಿಂತನೆ ನಡೆಸಬೇಕು ಎಂದರು.

ಪಟ್ಟಣದ ಕನ್ನಂಬಾಡಿಯಮ್ಮ ದೇವಾಲಯದ ಮುಂಭಾಗದಿಂದ ಮೆರವಣಿಗೆ ಹೊರಟ ಜ್ಯೋತಿ ರಥಕ್ಕೆ ತಹಸೀಲ್ದಾರ್ ನಿಸರ್ಗಪ್ರಿಯಾ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಕನ್ನಡದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು. ಸುವರ್ಣ ಕರ್ನಾಟಕ 50ರ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಕನ್ನಡ ಜಾಗೃತಿ ಮೂಡಿಸುವ ಜ್ಯೋತಿ ರಥವನ್ನು ರಾಜ್ಯಾದ್ಯಂತ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಎಲ್ಲರಲ್ಲಿಯೂ ಕನ್ನಡಾಭಿಮಾನ ಮೂಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಪ್ರತಿಯೊಬ್ಬರು ನಾಡುನುಡಿಯ ಬಗ್ಗೆ ಗೌರವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಂಬಾಡಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜ್ಯೋತಿ ರಥವನ್ನು ಪೂರ್ಣಕುಂಭದೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಸವೇಶ್ವರ ವೃತ್ತದವರೆಗೆ ಡೊಳ್ಳುಕುಣಿತ, ನಗಾರಿ ಮುಂತಾದ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಲಾಯಿತು. ಬಳಿಕ ರಥವನ್ನು ಪೊನ್ನಂಪೇಟೆ ಕಡೆಗೆ ಬೀಳ್ಕೊಡಲಾಯಿತು.

ತಾ.ಪಂ. ಇಒ ಸುನೀಲ್‌ಕುಮಾರ್, ಸಿಡಿಪಿಒ ಮಮತಾ, ಬಿಇಒ ರವಿಪ್ರಸನ್ನ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಪ್ಪ, ಕಸಾಪ ವಿವಿಧ ಘಟಕಗಳ ಪದಾಧಿಕಾರಿಗಳಾದ ಕಾಂತರಾಜು, ಬಿರ್ಲಾ ಹರೀಶ್, ಪಾಂಡು, ಉಮೇಶ್, ಮೋಹನ್‌ಕುಮಾರ್, ಪ್ರದೀಪ್‌ಕುಮಾರ್, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net