

ಮಡಿಕೇರಿ: ಸಾರ್ವಜನಿಕ ಜೀವನದಲ್ಲಿ ಎಲ್ಲರಂತೆ ಜೀವನ ಕಟ್ಟಿಕೊಳ್ಳಬೇಕಿದೆ. ಸಾಮಾನ್ಯ ಜನರಿಗಿಂತ ಭಿನ್ನರಲ್ಲ. ಸಾಧನೆಯ ಹಾದಿಯಲ್ಲಿ ತಮ್ಮ ನ್ಯೂನತೆ ಎಂದಿಗೂ ಅಡ್ಡಿ ಆಗುವುದಿಲ್ಲ. ಆದರೆ ಇವರಲ್ಲಿ ಮನೋಬಲವನ್ನು ಹೆಚ್ಚಿಸಬೇಕಿದೆ ಎಂದು ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿಕಾಳಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯುವ ಜನ ಸೇವಾ ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಾಗೂ ಸ್ವಾಮಿ ವಿವೇಕಾನಂದ ಯುವ ಸಂಘ, ಕೊಡಗು ಶಾಖೆ ಮತ್ತು ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಮಕ್ಕಳ ಶಾಲೆಗಳು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಓಂಕಾರ ಸದನದಲ್ಲಿ ಆಯೋಜಿಸಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.
ವಿಶೇಷಚೇತನರು ವಿವಿಧ ಕ್ಷೇತ್ರಗಳಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದು, ಬೇರೆಯವರಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಪ್ರತಿಭೆಯಿದ್ದರೂ ಎಲೆಮರೆಯಲ್ಲಿ ಇರುವ ವಿಶೇಷಚೇತನರನ್ನು ಗುರುತಿಸಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಹಾಗೂ ವಿಕಲಚೇತನರ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ನಂಜುಂಡೇಗೌಡ ಮಾತನಾಡಿ, ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗವಾಗಿ ಬದುಕಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗಗಳನ್ನು ಬಳಸಿಕೊಳ್ಳಬೇಕು. ವಿಶೇಷಚೇತನರಲ್ಲಿಯೂ ವಿಶೇಷವಾದ ಸಾಮರ್ಥ್ಯ ಇರುತ್ತದೆ. ಅಂತಹ ವಿಶೇಷ ಸಾಮರ್ಥ್ಯವನ್ನು ಪಾಲಕರು ಮತ್ತು ಸಮಾಜವು ಗುರುತಿಸಿ ಅವರ ಯಶಸ್ವಿಗೆ ಸಹಕಾರಿಯಾಗಬೇಕು ಎಂದರು.
ವಕೀಲ ಮನೋಜ್ ಬೋಪಯ್ಯ ಮಾತನಾಡಿ, ವಿಶೇಷಚೇತನರು ಎಂದರೆ ವಿಭಿನ್ನ ಸಾಮರ್ಥ್ಯವುಳ್ಳವರು ಎಂದರ್ಥ. ಅದು ನ್ಯೂನತೆಯಲ್ಲ ಅವರಿಗೆ ಬೇರೆ ರೀತಿಯ ಶಕ್ತಿ ಇದೆ. ಅವರಿಗೆ ಸಮಾನತೆ ನೀಡಬೇಕು ಎಂಬ ಉದ್ದೇಶದಿಂದ ೨೦೧೬ ರ ಅಂಗವಿಕಲರ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತಂದಿದೆ. ವಿಕಲಚೇತನರ ಹಕ್ಕುಗಳಿಗೆ ಯಾವುದೇ ಚ್ಯುತಿ ಬಾರದಂತೆ ಅವರ ಏಳಿಗೆಗೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅವರನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು. ವಿಶೇಷಚೇತನರಿಗೆ ಇರುವಂತಹ ತೊಡಕುಗಳನ್ನು ನಿವಾರಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿಶೇಷಚೇತನರಿಗೆ ಬಹುಮಾನ ಹಾಗೂ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡರವರು ಜಾಥಾಕ್ಕೆ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲ, ಸಲಹಾ ಸಮಿತಿ ಸದಸ್ಯ ಅಜಯ್ ಸೂದ್, ಜಿಲ್ಲಾ ದಿವ್ಯಾಂಗ ಒಕ್ಕೂಟದ ಅಧ್ಯಕ್ಷೆ ಈಶ್ವರಿ, ವಿಕಲಚೇತನರ ವಿವಿದೊದ್ದೇಶ ಸಹಕಾರ ಸಂಘದ ತಿರುಮಲೇಶ್ವರ, ಜಿಲ್ಲಾ ವಿಕಲಚೇತನ ಸಹಾಯವಾಣಿಯ ಮಾಹಿತಿ ಸಲಹೆಗಾರ ಎಚ್.ಎಸ್.ನವೀನ್, ವಿಶೇಷ ಮಕ್ಕಳ ಶಾಲೆಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಇತರರು ಇದ್ದರು.