

ಕಳಸ: ಹಿಂದೆ ಕೂಡು ಕುಟುಂಬದಲ್ಲಿ ಬದುಕುವ ಹೆಣ್ಣು ಮಕ್ಕಳ ಪರಿಸ್ಥಿತಿ ಕ್ಲಿಷ್ಟಕರವಾಗಿತ್ತು ಎಲ್ಲದಕ್ಕೂ ಅವಲಂಬಿಸಿ ಬದುಕುವ ತನ್ನ ಯಾವುದೇ ನೋವು, ಭಾವನೆಗಳನ್ನು ವ್ಯಕ್ತಪಡಿಸದೆ ನಿಸ್ಸಹಾಯಕಳಾಗಿ ಬದುಕುತ್ತಿದ್ದಳು ಎಂದು ಕವಿಯತ್ರಿ ಗೀತಾ ಮಕ್ಕಿಮನೆ ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಹಮ್ಮಿಕೊಂಡಿರುವ ಶ್ರಾವಣ ಸಂಜೆ ಯೋಗ ಧ್ಯಾನ ಮತ್ತು ಮಾತು ಮಂಥನ ಕಾರ್ಯಕ್ರಮದಲ್ಲಿ ಮಲೆನಾಡ ಮಹಿಳೆಯರ ಒಳ ತುಡಿತಗಳು ಎಂಬ ಕುರಿತು ಉಪನ್ಯಾಸ ನೀಡಿದ ಅವರು, ಹಿಂದೆ ಮಹಿಳೆ ಸಂಸಾರದ ಬಗ್ಗೆ ಹೊರಗೆ ಎಲ್ಲೂ ಮಾತನಾಡದೇ ಸಂಬಂಧಗಳ ಗೌಪ್ಯತೆ ಜತೆಗೆ ತಾಯಿ ಮನೆಯಿಂದಲೂ ಯಾವುದೇ ಪ್ರೋತ್ಸಾಹವಿಲ್ಲದೆ ತನ್ನ ಬದುಕಿನ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ಚಡಪಡಿಸುವ ಪರಿಸ್ಥಿತಿ ಇತ್ತು. ಆದರೆ ಸಮಾಜದಲ್ಲಿ ಇಂದು ಬದಲಾವಣೆಯಾಗಿದೆ. ಇಂದು ಮಹಿಳೆಯರಿಗೆ ಉನ್ನತ ಸ್ಥಾನಮಾನವನ್ನು ಸಮಾಜದ ದೊರಕಿಸಿಕೊಟ್ಟಿದೆ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್‌ಚಂದ್ರ ಮಾತನಾಡಿ, ಮಹಿಳೆಯ ಅಂದಿನ ಪರಿಸ್ಥಿತಿ ನಿಜವಾಗಿ ದುಸ್ತರವಾಗಿತ್ತು. ಇಂದು ಅದಕ್ಕೆ ತದ್ವಿರುದ್ಧವಾಗಿದೆ. ಮಹಿಳೆ ಇಂದು ಮಲೆನಾಡಿನ ಸಂಸ್ಕಾರಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಕೂಡು ಕುಟುಂಬವಿಲ್ಲ. ಸಂಬಂಧ ಕೊರತೆ ಹಾಗೂ ಸಂಸ್ಕಾರಗಳ ಕೊರತೆ ಇದೆ ಎಂದು ಹೇಳಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಯೋಗ ಗುರು ವೈ.ಪ್ರೇಮ್ ಕುಮಾರ್, ಕಸಾಪ ಜಿಲ್ಲಾ ಸಂಚಾಲಕ ಪಾಂಡುರಂಗ, ಸಾಹಿತಿ ಅ.ರಾ.ರಾಧಾಕೃಷ್ಣ ಇದ್ದರು.