

ಕೂಡ್ಲಿಗಿ: ಜೀವನದ ಸತ್ಯ ಹಾಗೂ ಆಧ್ಯಾತ್ಮಿಕ ರತ್ನಗಳನ್ನು ಪಡೆಯುವ ವಿಧಾನವನ್ನು ತಿಳಿಸುವ ಧರ್ಮ ಯಾರ ಆಸ್ತಿಯೂ ಅಲ್ಲ ಎಂದು ಸಾರಿದ ಅಕ್ಕಮಹಾದೇವಿ ಮಹಿಳಾ ಸಮಾಜದ ಮೇರು ಪರ್ವತವಾಗಿ ಬೆಳಗಿದರು ಎಂದು ಶಿರಸ್ತೇದಾರ್ ಮಹಮದ್ ಗೌಸ್ ಹೇಳಿದರು.
ಇದನ್ನೂ ಓದಿ:ಬಳಗದಿಂದ ಅಕ್ಕಮಹಾದೇವಿ ಜಯಂತಿ
ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಂಧನದಲ್ಲಿ ಬದುಕುತ್ತಿದ್ದ ಸ್ತ್ರೀ ಕುಲಕ್ಕೆ ಉತ್ತಮ ಸ್ಥಾನಮಾನ ದೊರಕಿಸುವ ಮೂಲಕ ಮಹಿಳೆಯರು ಸಮಾಜದ ಎಲ್ಲ ಸ್ತರಗಳಲ್ಲಿ ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲಳು ಎಂಬುದನ್ನು ಜಗತ್ತಿಗೆ ಸಾರಿದ ಧೀರ ಮಹಿಳೆಯಾಗಿದ್ದಳು.
ಅಕ್ಕಮಹಾದೇವಿಯವರನ್ನು ಶರಣ ಚಳವಳಿಯ ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀ ವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ ಹಲವು ರೀತಿ ಗುರುತಿಸಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ ಹಲವಾರಿಗೆ ಮಾದರಿಯಾಗಿದ್ದಾಳೆ ಎಂದು ತಿಳಿಸಿದರು.