

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿಟೈ (ಸೆಂಟರ್ ಫಾರ್ ಟೆಕ್ನಾಲಜಿ ಇನ್ನೊವೇಶನ್ ಆಂಡ್ ಎಂಟರಪ್ರಿನ್ಯೂರಶಿಪ್) ಹಾಗೂ ಹೈದರಾಬಾದ್ನ ಐಕೆಪಿ ನಾಲೆಡ್ಜ್ ಪಾರ್ಕ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ಉತ್ತರ ಕರ್ನಾಟಕ ಭಾಗದಲ್ಲಿ ಜೈವಿಕ ತಂತ್ರಜ್ಞಾನ ಉದ್ಯಮಶೀಲತೆ ಕುರಿತು ಸಿ-ಟೈ ನಲ್ಲಿ ಆಯೋಜಿಸಿದ್ದ ತಿಳಿವಳಿಕೆ ಕಾರ್ಯಾಗಾರದಲ್ಲಿ ಸಿ-ಟೈ ನಿರ್ದೇಶಕ ಶಿವಯೋಗಿ ತುರಮರಿ ಹಾಗೂ ಐಕೆಪಿ ನಾಲೆಡ್ಜ್ ಪಾರ್ಕ್ನ ಕೆ-ಟೆಕ್ ಇನ್ನೊವೇಶನ್ ಹಬ್ನ ಹಿರಿಯ ಸಮುದಾಯ ವ್ಯವಸ್ಥಾಪಕ ಸುಹ್ರುತ್ ಉಜ್ಜಿ ಒಪ್ಪಂದಕ್ಕೆ ಸಹಿ ಹಾಕಿದರು.
ಶಿವಯೋಗಿ ತುರಮರಿ ಮಾತನಾಡಿ, ಈ ಒಪ್ಪಂದವು ಜೈವಿಕ ತಂತ್ರಜ್ಞಾನದ ಆವಿಷ್ಕಾರಕ್ಕೆ ಅನುಕೂಲಕರ ವ್ಯವಸ್ಥೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿವೆ. ಈ ಪಾಲುದಾರಿಕೆಯು ಬಯೋಟೆಕ್ ಸ್ಟಾರ್ಟಅಪ್ಗಳನ್ನು ಪೋಷಿಸುವಲ್ಲಿ ನೆರವಾಗಲಿದೆ. ಮಾರ್ಗದರ್ಶನ, ಧನಸಹಾಯ ಅವಕಾಶಗಳು ಮತ್ತು ಉದ್ಯಮ ತಜ್ಞರ ನಡುವೆ ಸಂಪರ್ಕ ಸಾಧಿಸುವಲ್ಲಿ ಪರಿಣಾಮಕಾರಿ ಸಹಯೋಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಎಲ್ಇ ತಾಂತ್ರಿಕ ವಿವಿ ರೆಜಿಸ್ಟ್ರಾರ್ ಡಾ. ಬಸವರಾಜ ಅನಾಮಿ, ಐಕೆಪಿ ಉಪಾಧ್ಯಕ್ಷ ಡಾ. ವಿಶ್ವನಾಧಂ ದುಪ್ಪಟ್ಲಾ, ಸಹ ಉಪಾಧ್ಯಕ್ಷ ಡಾ. ಪ್ರಿಯಾಂಕಣ ಮುಖರ್ಜಿ, ಅಪೂರ್ವ ಭಟ್ನಾಗರ, ಇತರರು ಇದ್ದರು.