

ವಿಜಯಪುರ : ಪಟ್ಟಣದಲ್ಲಿ ಅಂಗತಟ್ಟಿ ನಂಜುಂಡಪ್ಪ ವೃತ್ತ (ಟೌನ್ ಹಾಲ್ ಸರ್ಕಲ್) ನಿಂದ ಕೋಲಾರ ರಸ್ತೆಯವರೆಗೂ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರೀಟಿಕರಣ ಹಲವು ತಿಂಗಳಿಂದ ನಡೆಯುತ್ತಿದ್ದು, ರಸ್ತೆಯಲ್ಲಿ ಏಕಮುಖ ಸಂಚಾರ ವಿಧಿಸಿದೆ. ಹೀಗಾಗಿ ಸಂಚಾರ ಸಿಕ್ಕು ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಅದರಲ್ಲಿಯೂ ಶುಕ್ರವಾರದ ಸಂತೆ ನಡೆಯಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ತಿರುಪತಿ, ಶಿಡ್ಲಘಟ್ಟ, ಸೇರಿ ರಾಜ್ಯ ಹಾಗೂ ಅಂತರ್ರಾಜ್ಯ ವಿಭಾಗದ ಎಲ್ಲ ಸರ್ಕಾರಿ, ಖಾಸಗಿ ಬಸ್ ಮತ್ತು ವಾಹನಗಳು ಇದೆ ಅಂಗತಟ್ಟಿ ನಂಜುಂಡಪ್ಪ ವೃತ್ತದ ಮೂಲಕವೇ ಹಾದು ಹೋಗುತ್ತವೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳು ಹಾಗೂ ಜನರು ಸಂಚರಿಸಲು ಪರದಾಡುತ್ತಿದ್ದಾರೆ. ಆದರೆ ಅಂಗತಟ್ಟಿ ನಂಜುಂಡಪ್ಪ ವೃತ್ತದಲ್ಲಾಗಲಿ, ಬಸವೇಶ್ವರ ಬಸ್ ನಿಲ್ದಾಣದಲ್ಲಾಗಲಿ (ಮೋರಿ ಸ್ಟಾಪ್) ಯಾವುದೇ ಪೊಲೀಸ್ ಸಿಬ್ಬಂದಿ ನೇಮಿಸದೆ ಜನರೇ ಸಂಚಾರ ನಿಯಂತ್ರಣ ಮಾಡಿಕೊಳ್ಳಲಿ ಎಂದು ಬಿಟ್ಟಂತೆ ಕಾಣುತ್ತಿದೆ. ಬೆಳಗ್ಗೆ 9 ರಿಂದ 11 ಗಂಟೆ ಹಾಗೂ ಸಂಜೆ 3.30 ರಿಂದ- 5.30ರವರೆಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಸುಮಾರು 4ರಿಂದ 5 ಸಾವಿರಕ್ಕೂ ಹೆಚ್ಚು ಮಕ್ಕಳು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಪೊಲೀಸ್ ಇಲಾಖೆಯ ಸಭೆಗಳಲ್ಲಿಯೂ ಈ ಬಗ್ಗೆ ಪೊಲೀಸರಿಗೆ ಗಮನಕ್ಕೆ ತಂದಿದ್ದರೂ, ಪತ್ರಿಕೆಗಳಲ್ಲಿ ಹಲವು ಬಾರಿ ಪ್ರಕಟಗೊಂಡಿದ್ದರೂ ಪೊಲೀಸರು ವಾಹನದಟ್ಟಣೆ ನಿಯಂತ್ರಿಸಲು ಮುಂದಾಗುತ್ತಿಲ್ಲ.
ಹಣ ವಸೂಲಿ ಆರೋಪ : ಪಟ್ಟಣದ ಹೊರ ಭಾಗದಲ್ಲಿ ಜಂಗ್ಲಿ ಪೀರ್ ಬಾಬಾ ದರ್ಗಾ ಸೇರಿ ಹಲವು ಆಯಕಟ್ಟು ಪ್ರದೇಶಗಳಲ್ಲಿ ನಿಂತುಕೊಂಡು ಹೆಲ್ಮೆಟ್ ಇಲ್ಲ, ಡಿಎಲ್ ಇಲ್ಲ, ತ್ರಿಬಲ್ ರೈಡಿಂಗ್ ಸೇರಿ ಮುಂತಾದ ಕೇಸ್ಗಳ ಬಗ್ಗೆ ಹೆಚ್ಚು ಆಸಕ್ತಿವಹಿಸಿ ದಂಡ ಸಂಗ್ರಹ ಮಾಡುತ್ತಾರೆ, ಇಲ್ಲಿನ ಮೂಲಸಮಸ್ಯೆಗಳ ಪರಿಹಾರಕ್ಕೆ ಪೊಲೀಸರು ಕ್ರಮ ಜರುಗಿಸುತ್ತಿಲ್ಲ ಎಂದು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಹಿಂದೆ ಇದ್ದ ಎಲ್ಲ ಪಿಎಸ್ಐ ಹಾಗೂ ವೃತ್ತ ನಿರೀಕ್ಷಕರು ರಸ್ತೆಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇದೀಗ ರಸ್ತೆಗೆ ಬಾರದೇ ಠಾಣೆಯಲ್ಲಿಯೇ ಕುಳಿತಿರುವ ಸಬ್ಇನ್ಸ್ಪೆಕ್ಟರ್ ಹಾಗೂ ಇನ್ಸ್ಪೆಕ್ಟರ್ಗಳು ಯಾರೆಂದು ಯಾರಿಗೂ ತಿಳಿಯದಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.