

ಮಂಡ್ಯ: ನಮ್ಮ ಗುರಿಗಳ ಸಮರ್ಪಕವಾಗಿ ಅನುಷ್ಠಾನಗೊಂಡರೆ ಸೇವೆಯ ಸಾರ್ಥಕತೆ ಪಡೆಯುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಸಿಪಾಯಿ ಹೋಟೆಲ್ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಜಿಲ್ಲೆ 268 ಹಾಗೂ ಅಲಯನ್ಸ್ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿಗಳಿಗೆ ಆಯೋಜಿಸಿದ್ದ ಪ್ರೇರಣ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸೇವೆಯಲ್ಲಿ ತೊಡಗಿರುವವರು ಒಬ್ಬಂಟಿಯಾಗಿ ಸೇವೆ ಮಾಡುವ ಬದಲು ಸೇವಾ ಸಂಸ್ಥೆಗಳ ಮೂಲಕ ಸಲ್ಲಿಸೇಕು. ಇದರಿಂದ ಹತ್ತಾರು ಜನರಿಗೆ ಸಹಾಯ ಮಾಡಿದಂತಾಗುತ್ತದೆ. ಇಂತಹ ಕ್ಲಬ್‌ಗಳು ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನೊಂದವರಿಗೆ ಆರ್ಥಿಕ ಸಹಾಯ ಹಸ್ತ ನೀಡುವ ಮೂಲಕ ಸಾರ್ಥಕತೆ ಕಾಣುವಂತಾಗುತ್ತದೆ ಎಂದರು.
ಅಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ್ ವಿ.ಬೈರಿ ಮಾತನಾಡಿ, ಕ್ಲಬ್‌ಗಳ ಸದಸ್ಯರು ಸೇವಾ ಕಾರ್ಯಗಳಿಗೆ ಕೈಜೋಡಿಸಿ ಮುನ್ನುಗುವುದರಿಂದ ಸೇವಾ ಮನೋಭಾವ ಹೆಚ್ಚುತ್ತದೆ. ಇತರೆ ಕ್ಲಬ್‌ಗಳಿಗೆ ಮಾದರಿಯಾಗಿ ನಿಲ್ಲಬೇಕು. ಮೌಂಟ್ ಎವರೆಸ್ಟ್ ಹತ್ತಲು ಕಷ್ಟವಿರಬಹುದು. ಆದರೆ ಪರಿಶ್ರಮ ಪಟ್ಟರೆ ಯಾವುದು ಅಸಾಧ್ಯವಲ್ಲ. ಇಂದು ಮಹಿಳೆಯರು ಕೂಡ ಶಿಖರವನ್ನು ಏರುವ ಮೂಲಕ ಪುರುಷರಿಗಿಂತ ನಾವು ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಹಾಗೆಯೇ ನಮ್ಮ ಅಲಯನ್ಸ್ ಕ್ಲಬ್ ಮೂಲಕ ಅಗತ್ಯತೆ ಇರುವವರನ್ನು ಗುರುತಿಸಿ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೆಲ್ಲೂರಿನ ಡಾ.ಕಲಜಾಗರ್, ಅಂತಾರಾಷ್ಟ್ರೀಯ ತರಬೇತುದಾರರಾದ ಚೇತನ್‌ರಾಂ, ಜಿ.ಪಿ.ದಿವಾಕರ್ ಹಾಗೂ ಪ್ರಾಂತಪಾಲ ಕೆ.ಟಿ.ಹನುಮಂತು ಕಾರ್ಯ ನಿರ್ವಹಿಸಿದರು. ಅಂತಾರಾಷ್ಟ್ರೀಯ ಸಮಿತಿ ಸದಸ್ಯರಾದ ಕೆ.ಎಂ.ಮುನಿಯಪ್ಪ, ಅಜಂತಾ ರಂಗಸ್ವಾಮಿ, 1ನೇ ಉಪ ಪ್ರಾಂತಪಾಲ ಎಚ್.ಮಾದೇಗೌಡ, 2ನೇ ಉಪ ಪ್ರಾಂತಪಾಲ ಕೆ.ಆರ್.ಶಶಿಧರ ಈಚಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಚ್.ಚಂದ್ರಶೇಖರ್, ಜಿಲ್ಲಾ ಸಂಪುಟ ಖಜಾಂಚಿ ಟಿ.ಎನ್.ರಕ್ಷಿತ್‌ರಾಜ್, ಪಿಆರ್‌ಒ ಅಪ್ಪಾಜಿ, ರಾಯಭಾರಿ ಎಸ್.ಜೆ.ಮಂಜುನಾಥ್, ವೈ.ಎಚ್.ರತ್ನಮ್ಮ ಭಾಗವಹಿಸಿದ್ದರು.