ಮಕ್ಕಳ ಕಲಿಕೆಯನ್ನು ಪ್ರೇರೇಪಿಸಿ

12 pnh 1
Published on

ಪಂಚನಹಳ್ಳಿ : ಶಿಕ್ಷಕರ ಆಂತರಿಕ ಪ್ರೇರಣೆ ಮತ್ತು ವೃತ್ತಿಪರ ಕೌಶಲ್ಯ ಹೆಚ್ಚಿಸುವಲ್ಲಿ ಸಮಾಲೋಚನಾ ಸಭೆ ಸಹಕಾರಿಯಾಗಿವೆ. ಸಮಾಲೋಚನಾ ಸಭೆಗಳು ಮಕ್ಕಳ ಕಲಿಕೆ ಪ್ರೇರೇಪಿಸಬೇಕು ಎಂದು ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜ್ ನಾಯ್ಕ್ ತಿಳಿಸಿದರು.

ಕಲ್ಲೇಲಿಂಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಣ್ಣೇಗೆರೆ,ಪಂಚನಹಳ್ಳಿ, ಕೆರೆಸಂತೆ, ಸಿಂಗಟಗೆರೆ, ಕ್ಲಸ್ಟರ್ ಮಟ್ಟದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಶಾಲೆ ಹಂತದಲ್ಲಿ ಎಸ್‌ಡಿಎಂಸಿ ಪಾಲಕರು, ಶಿಕ್ಷಕರು ಮೂರೂ ವರ್ಗದವರು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಉತ್ತಮ ಶಾಲೆ ಹೊಂದಬಹುದು ಇದಕ್ಕೆ ಕಲ್ಲೇಲಿಂಗನಹಳ್ಳಿ ಶಾಲೆ ಉತ್ತಮ ಉದಾಹರಣೆಯಾಗಿದೆ ಎಂದರು.

ಈ ಶಾಲೆ ತಾಲೂಕಿನಲ್ಲಿಯೇ ಮಾದರಿ ಶಾಲೆಯಾಗಿದ್ದು, ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಇಬ್ಬರೂ ಶಿಕ್ಷಕರು ಜಿಲ್ಲಾಮಟ್ಟದ ಪ್ರಶಸ್ತಿ ವಿಜೇತರಾಗಿರುವುದು ಈ ಗ್ರಾಮದ ಸೌಭಾಗ್ಯ. ಈ ಶಾಲೆಗೆ ಹಳೆ ವಿದ್ಯಾರ್ಥಿಗಳು ಲಕ್ಷಾಂತರ ರೂ.ಧನಸಹಾಯ ಮಾಡಿರುವುದು ಶಿಕ್ಷಣದ ಮೌಲ್ಯವನ್ನು ತಿಳಿಸುತ್ತದೆ. ಸಮಾಲೋಚನಾ ಸಭೆಯನ್ನು ಗ್ರಾಮದ ಹಬ್ಬದಂತೆ ಮಾಡುತ್ತಿದ್ದು ಈ ಗ್ರಾಮದ ಜನರಿಗೆ ಶಿಕ್ಷಣದ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಪ್ರೇಮ್‌ಕುಮಾರ್ ಮಾತನಾಡಿ, ಶಾಲೆಗಳ ಜತೆ ನಿರಂತರವಾಗಿ ಪಾಲಕರು, ಪೋಷಕರು, ಅಧಿಕಾರಿಗಳು ಬಾಂಧವ್ಯ ಹೊಂದಿರಬೇಕು. ಆಗ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ. ರಾಜ್ಯಸರ್ಕಾರ ಇಂದು ತಾಲೂಕಿನ ಒಂದು ಉತ್ತಮ ಎಸ್‌ಡಿಎಂಸಿ ಆಡಳಿತ ಮಂಡಲಿ ಶಾಲೆಗೆ ಒಂದು ಲಕ್ಷ ರೂ.ಬಹುಮಾನ ನೀಡುತ್ತದೆ. ಸರ್ಕಾರ ಶಿಕ್ಷಣ ಗುಣಮಟ್ಟವನ್ನು ಕಾಪಾಡಲು ಪ್ರತಿ ಹಂತದಲ್ಲೂ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದು ಇದರಿಂದ ಮಕ್ಕಳ ಶಿಕ್ಷಣ ಗುಣಮಟ್ಟ ಕಾಪಾಡಲು ಸಾಧ್ಯ ಎಂದು ತಿಳಿಸಿದರು.

ಪಾಲಕ ಕಲ್ಲೇಶ್ ಮಾತನಾಡಿ, ಸರ್ಕಾರಿ ಶಾಲೆಗೆ ಎಂದೂ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಪಾಲಕರು ಅದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಕೊಡಿಸಬೇಕು. ಪಾಲಕರು ನಿರಂತರವಾಗಿ ಶಾಲೆ ಜತೆ ಒಡನಾಟ ಹೊಂದಿದಲ್ಲಿ ಒಂದು ಉತ್ತಮ ಶಾಲಾ ವಾತಾವರಣ ರೂಪಿಸಬಹುದು ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ್, ನಾಗರಾಜು, ಕಲ್ಲೇಶಪ್ಪ, ಸೋಮಶೇಖರ್, ಕಲ್ಲೇಶಪ್ಪ , ದೊಡ್ಡನಿಂಗಪ್ಪ, ಮಲ್ಲೇಶಪ್ಪ, ಕಲ್ಲಪ್ಪ, ಮಲ್ಲಿಕಾರ್ಜುನ್, ಕಲ್ಲೇಶ, ಬಾಬು, ಶಾಲಾ ಶಿಕ್ಷಕರಾದ ಮಂಜುಳಾ, ಪ್ರಾಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net