

ಮುಂಡರಗಿ: ಪರಿಸರವನ್ನು ತಾಯಿಯ ಸ್ಥಾನದಲ್ಲಿ ಕಂಡಿರುವ ಶ್ರೇಷ್ಠ ಪರಂಪರೆ ನಮ್ಮದಾಗಿದೆ. ಭೂಮಿಯ ಮೇಲೆ ಎಲ್ಲಿಯವರೆಗೆ ವನ-ಕಾನನ ಇರುತ್ತದೆಯೋ ಅಲ್ಲಿಯವರೆಗೆ ಜೀವಿಗಳ ಅಸ್ತಿತ್ವ ಇರುತ್ತದೆ ಎಂಬುದನ್ನು ಅರಿತರೆ, ಗಿಡ-ಮರಗಳು ನಮಗೆ ಎಷ್ಟು ಅನಿವಾರ್ಯ ಎನ್ನುವುದು ತಿಳಿಯುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಮಂಜುನಾಥ ಇಟಗಿ ಹೇಳಿದರು.
ತಾಲೂಕಿನ ಕಪ್ಪತಗುಡ್ಡದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿಸರ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರವನ್ನು ಹಿರಿಯರು ನಾಗ ಬನ, ದೇವರ ಕಾಡು, ನೀರೆಂದರೆ ಪಾವನ ತೀರ್ಥ, ಭೂಮಿ ಅನ್ನ ಕೊಡುವ ತಾಯಿ, ಗಿಡಗಳನ್ನು ದೇವರೆಂದು ಮತ್ತು ಅವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ನೋಡುತ್ತಿದ್ದರು. ಆಮ್ಲಜನಕ ನೀಡುವ ಮರ ಗಿಡಗಳನ್ನು ನಾವು ಎಷ್ಟು ನೆಡುತ್ತಿದ್ದೇವೆ ಮತ್ತು ಪೋಷಣೆ ಮಾಡುತ್ತವೆ? ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದರು.
ಶ್ರೀನಿವಾಸ ಕಟ್ಟಿಮನಿ, ಶೇಖರಗೌಡ ಪಾಟೀಲ, ಚಂದ್ರು ಹಿರೇಮಠ, ಬಸವರಾಜ ಹಕ್ಕಂಡಿ, ರವಿ ಹೊಸಪೇಟೆ, ಶಿವು ನವಲಗುಂದ, ಅಂದಪ್ಪ ಶೀರಿ, ಬಸವರಾಜ ಅಳವಂಡಿ, ಮಂಜುನಾಥ ಮಡಿವಾಳರ, ರಾಜು ಹಂಪಿಹೋಳಿ, ಮುತ್ತಣ್ಣ ಉಪ್ಪಾರ, ಬದರಿನಾಥ ಅಂಗಡಿ ಇತರರು ಇದ್ದರು.