

ಹುನಗುಂದ: ತಾಯಿಯ ಹಾಲು ಅಮೃತಕ್ಕೂ ಮಿಗಿಲಾದದ್ದು, ಜನನ ಹಂತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಾಯಿ ಹಾಲು ನೀಡಿದಾಗ ಮಾತ್ರ ಮಗುವಿನಲ್ಲಿ ಜೀವನದುದ್ದಕ್ಕೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಚಿಕ್ಕಮಕ್ಕಳ ತಜ್ಞೆ ಡಾ. ಸುಜಾತಾ ಪಾಟೀಲ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಗೌರಮ್ಮ ಚರಂತಿಮಠ ನರ್ಸಿಂಗ್ ಮಹಾವಿದ್ಯಾಲಯದ ಸಹಯೋಗದಲ್ಲಿ ಒಂದು ವಾರವರೆಗೆ ಹಮ್ಮಿಕೊಂಡಿದ್ದ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದ್ಯದ ಬದುಕಿನ ಸೌಂದರ್ಯ ಹಾಳಾಗುತ್ತದೆ ಎಂದು ತಾಯಂದಿರು ಸ್ವಲ್ಪ ಅವಧಿಯಲ್ಲೇ ಮಕ್ಕಳಿಗೆ ಹಾಲು ನೀಡುವುದನ್ನು ನಿಲ್ಲಿಸುತ್ತಾರೆ. ಇದರಿಂದ ಮಕ್ಕಳು ಅನಾರೋಗ್ಯಕ್ಕೀಡಾಗಬಹುದು ಎಂದರು.
ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಿರು ನಾಟಕ ಮೂಲಕ ಸ್ತನ್ಯಪಾನದ ಮಹತ್ವ ನೀಡಿದರು. ಪ್ರಾಚಾರ್ಯ ಸುರೇಶಗೌಡ ಪಾಟೀಲ, ಆಪ್ತ ಸಮಾಲೋಚಕಿ ಆರ್.ಕೆ. ಕುಂಟೋಜಿ, ಸುಮಿತ್ರಾ, ವೀಣಾ ಕರಗಿ, ಮಹಾಂತೇಶ ಭಾವಿಕಟ್ಟಿ, ಮಲ್ಲು ಮೂಲಿಮನಿ, ಬಸವರಾಜ ದರಗಾದ ಉಪಸ್ಥಿತರಿದ್ದರು. ರಾಹುಲ್ ಮೈತ್ರಿ ಸ್ವಾಗತಿಸಿದರು. ಅಂಕಿತ್ ಕುಂಟೋಜಿ ನಿರೂಪಿಸಿದರು. ಚಂದ್ರಕಲಾ ಚಲವಾದಿ ವಂದಿಸಿದರು.