

ಸವಣೂರ: ಮಗುವಿಗೆ ತಾಯಿ ಹಾಲು ಅಮೃತಕ್ಕೆ ಸಮಾನವಾದುದು. ತಾಯಿ-ಮಗುವಿನ ಬಾಂಧವ್ಯ ಗಟ್ಟಿಯಾಗಲು ಸಾಧ್ಯವಾಗಲಿದೆ ಎಂದು ಮಹಿಳಾ ಸಮಾಖ್ಯಾ ತಾಲೂಕು ಸಂಪನ್ಮೂಲ ವ್ಯಕ್ತಿ ಸುನಂದಾ ಚಿನ್ನಾಪೂರ ತಿಳಿಸಿದರು.
ತಾಲೂಕಿನ ಯಲವಿಗಿ ಗ್ರಾಮದ ಪರಮವಾಡಿ ತಾಂಡಾದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಮಾಖ್ಯಾ, ಆರೋಗ್ಯ ಇಲಾಖೆ, ಆರ್ಥಿಕ ಅಮೂಲ್ಯ ಸಾಕ್ಷರತಾ ಕೇಂದ್ರ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ತನ್ಯಪಾನ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ತಾಯಂದಿರು ಮತ್ತು ಬಾಣಂತಿಯರು ಮಕ್ಕಳಿಗೆ ಹಾಲುಣಿಸುವದು ಅತಿ ಅವಶ್ಯವಿದೆ. ತಾಯಿ ಎದೆಹಾಲು ತಾಯಿ ಮತ್ತು ಮಗುವಿನ ಮಧ್ಯೆ ಪ್ರೀತಿ ಬಾಂಧವ್ಯ ಮಮತೆ ವಾತ್ಸಲ್ಯ ಹಾಗೂ ಕರುಣೆಯನ್ನು ಬೆಸೆಯುತ್ತದೆ. ಆದ್ದರಿಂದ, ಬಾಣಂತಿಯರು ಹೆರಿಗೆಯಾದ ಕೆಲವೆ ಗಂಟೆಗಳಲ್ಲಿ ಶಿಶುಗಳಿಗೆ ಶೀಘ್ರ ಹಾಲುಣಿಸುವುದಕ್ಕೆ ಕುಟುಂಬಸ್ಥರು ಬೆಂಬಲಿಸುವುದು ಅವಶ್ಯಕತೆಯಾಗಿದೆ. ಇದರಿಂದ ಶಿಶುಗಳ ಉತ್ತಮ ಆರೋಗ್ಯ ಮತ್ತು ಬೆಳವಣಿಗೆ ಪುಷ್ಟಿ ನೀಡಿದಂತಾಗುತ್ತದೆ ಎಂದರು.
ಯಲವಿಗಿ ಸಿಎಚ್‌ಒ ಡಾ. ಸವಿತಾ ಸೂರಣಗಿ ಮಾತನಾಡಿ, ಮಗು ಜನಿಸಿದ ಒಂದು ಗಂಟೆಯ ಒಳಗೆ ಹಾಲುಣಿಸಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿದಂತಾಗುತ್ತದೆ ಎಂದರು.
ಬಾಲ ವಿಕಾಸ ಸಮಿತಿಯ ಸದಸ್ಯೆ ಶಾಂತವ್ವ ಚವ್ವಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ಸಂಕನಗೌಡ ಪಾಟೀಲ, ಹರೀಶ ಹಿರಳ್ಳಿ, ಅಂಗನವಾಡಿ ಕಾರ್ಯಕರ್ತೆರಾದ ಜಿ.ಬಿ. ಹಿರೇಮಠ, ದ್ರಾಕ್ಷಾಯಿಣಿ ಉಮಚಗಿ, ಉಮಾ ಸಂಕಮ್ಮನವರ, ಆರ್.ಎಚ್.ಹುಲ್ಲೂರ, ಜಿ.ಬಿ.ಬುಡ್ರುಗಟ್ಟಿ, ರೇಣುಕಾ ಉಪ್ಪಾರ, ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆರು ಹಾಗೂ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಇದ್ದರು.
ತೇಜಶ್ರೀ ನಾಯಕ್, ಕೆಎಚ್ ದೊಡ್ಡಮನಿ ಹಾಗೂ ಎಚ್.ಬಿ. ಹಿರೇಮಠ ನಿರ್ವಹಿಸಿದರು.