

ಕೆ.ಆರ್.ಸಾಗರ: ಮಗುವಿಗೆ ತಾಯಿ ಹಾಲು ಸರ್ವಶ್ರೇಷ್ಠ ಹಾಗೂ ಅತ್ಯಮೂಲ್ಯವಾದ ಆಹಾರ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಪ್ರಫುಲ್ಲಾ ತಿಳಿಸಿದರು.
ಕೆ.ಆರ್. ಸಾಗರದ ಜನತಾ ಕಾಲನಿ ಬಡವಾಣೆಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
ಮಗು ಹುಟ್ಟಿದ ಒಂದು ಗಂಟೆಯೊಳಗೆ ಅಥವಾ ಸಾಧ್ಯವಾದಷ್ಟು ಬೇಗ ತಾಯಿ ಹಾಲು ಉಣಿಸುವುದರಿಂದ ಸರ್ವಕಾಲಿಕ ರೋಗ ನಿರೋಧಕ ಶಕ್ತಿಯನ್ನು ಹೊಂದುವುದು. ಹೆರಿಗೆಯ ನಂತರ ಮಗುವನ್ನು ತಾಯಿಯ ಸಮೀಪದಲ್ಲಿ ಮಲಗಿಸುವುದರಿಂದ ಮಗುವಿನ ಸುರಕ್ಷತಾ ಭಾವವು ಬಲಗೊಳ್ಳುತ್ತದೆ. ಮಗುವಿನ ಸ್ಪರ್ಶ ತಾಯಿಯ ಹಾಲಿನ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಅಲ್ಲದೆ ತಾಯಿಯ ಗರ್ಭಕೋಶ ತನ್ನ ಸಹಜ ಸ್ಥಿತಿಗೆ ಮರಳಿ ರಕ್ತಸ್ರಾವ ತಡೆಯುತ್ತದೆ ಎಂದರು.
ಆರು ತಿಂಗಳವರೆಗೆ ಮಗುವಿಗೆ ತಾಯಿಯ ಹಾಲು ಮಾತ್ರ ನೀಡಬೇಕು. ಯಾವುದೇ ದ್ರವ ಪದಾರ್ಥವನ್ನು ಮಗುವಿಗೆ ಕುಡಿಸಬಾರದು. ಬೇರೆ ಏನಾದರೂ ಕುಡಿಸಿದರೆ ಮಗುವಿಗೆ ಅಜೀರ್ಣವಾಗಿ ಅತಿಸಾರ ಭೇದಿ ಉಂಟಾಗಿ ತೂಕ ಕಳೆದುಕೊಳ್ಳುತ್ತದೆ. ಪೂರಕ ಆಹಾರದ ಜತೆ ಎರಡು ವರ್ಷದವರೆಗೆ ಮಗುವಿಗೆ ತಾಯಿ ಹಾಲುಣಿಸುವುದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಸಿಡಿಪಿಒ ಧನಲಕ್ಷ್ಮೀ ಮಾತನಾಡಿ, ತಾಯಂದಿರು ಸಮರ್ಪಕವಾಗಿ ಹಾಲು ಕುಡಿಸಿ ಮಕ್ಕಳ ಸುಸ್ಥಿರ ಆರೋಗ್ಯ ಕಾಪಾಡಬೇಕು ಹಾಗೂ ತಾಯಿ ಮಗುವಿನ ಬಾಂಧವ್ಯ ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಭ್ರೂಣ ಹತ್ಯೆ ತಡೆಗಟ್ಟುವ ಕುರಿತು ಚರ್ಚಿಸಲಾಯಿತು.
ಗ್ರಾಪಂ ಸದಸ್ಯೆ ರಾಣಿ, ಕಾರ್ಯದರ್ಶಿ ರಘುರಾಮ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೀತಾ, ಜಯಶೀಲಾ, ಆರೋಗ್ಯ ನಿರೀಕ್ಷಣಾಧಿಕಾರಿ ರಮ್ಯಾ, ಅಂಗನವಾಡಿ ಕಾರ್ಯಕರ್ತೆ ಅನಿತಾ, ಲಕ್ಷ್ಮಮ್ಮ, ಮಂಗಳಾ, ಮಾಲಾ, ಭಾಗ್ಯಲಕ್ಷ್ಮೀ, ಶೋಭಾ, ನೇತ್ರಾವತಿ, ಮೋಹನಕುಮಾರಿ, ಸಣ್ಣಮ್ಮ, ಜ್ಯೋತಿ, ರೇಖಾ, ಶಾಂತಮ್ಮ ಇದ್ದರು.