ಬಿಮ್ಸ್‌ನಲ್ಲಿ ತಾಯಿ ಹಾಲು ಬ್ಯಾಂಕ್!

Screenshot_2024-05-16-00-15-38-99.jpg
Published on

ಜಗದೀಶ ಹೊಂಬಳಿ ಬೆಳಗಾವಿ
ಹುಟ್ಟಿದ ಮಗುವಿಗೆ ತಾಯಿ ಹಾಲು ಜೀವಾಮೃತವಾಗಿದೆ. ನವಜಾತ ಶಿಶುಗಳಿಗೆ ‘ತಾಯಿ ಹಾಲು’ ರೋಗ ನಿವಾರಣೆಯ ದಿವ್ಯ ಪೌಷ್ಟಿಕಾಂಶ ಒದಗಿಸುತ್ತದೆ. ಕೆಲ ತಾಯಂದಿರಲ್ಲಿ ಹಾಲಿನ ಕೊರತೆಯಿಂದ ಮಗುವಿನ ಬೆಳವಣಿಗೆಯಲ್ಲಿ ಅಡ್ಡಪರಿಣಾಮವಾಗುತ್ತವೆ. ಇಂತಹ ಸಮಸ್ಯೆ ನಿವಾರಿಸುವುದಕ್ಕೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ (ಬಿಮ್ಸ್)ನಲ್ಲಿ ತಾಯಿ ಹಾಲಿನ ‘ಮಿಲ್ಕ್ ಬ್ಯಾಂಕ್’ ಆರಂಭಿಸಿ, ವಿನೂತನ ಕ್ರಮ ಕೈಗೊಂಡಿದ್ದಾರೆ.
 ಹೆರಿಗೆಗೆಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುವ ಹಲವಾರು ಗರ್ಭಿಣಿಯರಿಗೆ ಹೆರಿಗೆಯಾದ ಬಳಿಕ ಅಗತ್ಯಕ್ಕೆ ತಕ್ಕಷ್ಟು ಹಾಲು ಬರುವುದಿಲ್ಲ. ಕೆಲ ಬಾಣಂತಿಯರು ಮೃತಪಡುತ್ತಾರೆ. ಕೆಲ ಶಿಶುಗಳಿಗೆ ಅಗತ್ಯಕ್ಕೆ ತಕ್ಕಷ್ಟು ಹಾಲು ದೊರೆಯದೆ ಅಸ್ವಸ್ಥವಾಗಿರುತ್ತವೆ. ಈ ಕೊರತೆ ನೀಗಿಸುವುದಕ್ಕೆ ಜಿಲ್ಲಾಸ್ಪತ್ರೆಯಲ್ಲಿ ‘ಮಿಲ್ಕ್ ಬ್ಯಾಂಕ್’ ತೆರೆಯಲಾಗಿದೆ. ಆರೋಗ್ಯವಂತ ತಾಯಂದಿರಿಂದ ಹಾಲು ಪಡೆದು ಮಿಲ್ಕ್ ಬ್ಯಾಂಕ್‌ನಲ್ಲಿ ಸಂಗ್ರಹ ಮಾಡುತ್ತಾರೆ. ಸಂಸ್ಕರಿಸಿಟ್ಟು ಬಳಿಕ ಅಗತ್ಯ ಇದ್ದ ಶಿಶುಗಳಿಗೆ ಈ ಹಾಲು ನೀಡಲಾಗುತ್ತದೆ. ಬಿಮ್ಸ್‌ನ ‘ಎನ್‌ಐಸಿಯು’ನಲ್ಲಿ ಸುಮಾರು 40 ಅಸ್ವಸ್ಥ ಹಾಗೂ ಅಪೌಷ್ಟಿಕ ಶಿಶುಗಳು ಚಿಕಿತ್ಸೆ ಪಡೆಯುತ್ತಿವೆ. ಇಂತಹ ಮಕ್ಕಳಿಗೆ ತಾಯಂದಿರಿಂದ ಸಂಗ್ರಹಿಸಿದ  ಹಾಲು ಸಹಾಯಕ್ಕೆ ಬರುತ್ತದೆ ಎಂದು ವೈದ್ಯರು ಪ್ರತಿಕ್ರಿಯೆ ನೀಡಿದ್ದಾರೆ.
 ಎನ್‌ಐಸಿಯು ಬಳಿ ‘ಮಿಲ್ಕ್‌ಬ್ಯಾಂಕ್’ ಆರಂಭ:
 ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ಪಕ್ಕದಲ್ಲಿರುವ ಎನ್‌ಐಸಿಯು (ನ್ಯೂಯಾನಟಲ್ ಇಂಟೆನ್ಸಿವ್ ಕೇರ್ ಯುನಿಟ್) ಬಳಿ ‘ಮಿಲ್ಕ್‌ಬ್ಯಾಂಕ್’ ತೆರೆಯಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಆರೋಗ್ಯವಂತ ತಾಯಂದಿರಿಗೆ ಹಾಲು ದಾನ ಮಾಡುವಂತೆ ಮನವೊಲಿಸುತ್ತಿದ್ದಾರೆ. ತಾಯಂದಿರುವ ಸ್ವಯಂ ಪ್ರೇರಣೆಯಿಂದ ಹೋಗಿ  ಹಾಲು ದಾನ ನೀಡಬಹುದು. ಮಿಲ್ಕ್‌ಬ್ಯಾಂಕ್ ಬಗ್ಗೆ ಆಸ್ಪತ್ರೆಯ ವೈದ್ಯರು ತಾಯಂದಿರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇಂತಹ ಮಿಲ್ಕ್‌ಬ್ಯಾಂಕ್ ಸದ್ಯ ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ಹೊರತುಪಡಿಸಿದರೆ ಬೆಳಗಾವಿಯಲ್ಲಿ ಆರಂಭವಾಗಿರುವುದು ಎರಡನೆಯದ್ದಾಗಿದೆ. ‘ಮಿಲ್ಕ್ ಬ್ಯಾಂಕ್’ಗೆ ಅಗತ್ಯವಿರುವ ಮಿಲ್ಕ್ ಸಕ್ ಮಷಿನ್, ಡೀಪ್ ಫ್ರೀಜರ್, ರೆಫ್ರಿಜಿರೇಟರ್, ಲಾಮಿನಾರ್ ಏರ್ ಫ್ಲೋ, ಪಾಸ್ಟೇರೈಸರ್, ಹಾಟ್ ಏರ್ ಓವೆನ್, ಸ್ಟೋರೇಜ್ ಮಾಡಿಟ್ಟುಕೊಳ್ಳುವುದಕ್ಕೆ ಎಲ್ಲ ರೀತಿಯ  ವ್ಯವಸ್ಥೆ ಮಾಡಿಟ್ಟುಕೊಳ್ಳಾಗಿದೆ. ಇನ್ನು ಒಂದು ವಾರದಲ್ಲಿ ‘ಮಿಲ್ಕ್‌ಬ್ಯಾಂಕ್’ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.
 ವೈದ್ಯರ ಮನವಿ:
 ಕೆಲವು ತಾಯಂದಿರಲ್ಲಿ ಎದೆಹಾಲಿನ ಪ್ರಮಾಣ ಜಾಸ್ತಿಯಾಗಿರುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದುಕೊಂಡು ಎದೆಹಾಲನ್ನು ಹೊರಗೆ ಹಾಕುತ್ತಿರುತ್ತಾರೆ. ಅಂತಹ ತಾಯಂದಿರು ಮಿಲ್ಕ್‌ಬ್ಯಾಂಕ್‌ಗೆ ಹಾಲು ನೀಡುವಂತೆ ಆಸ್ಪತ್ರೆಯ ತಜ್ಞರು ಮನವಿ ಮಾಡಿದ್ದಾರೆ. ಈ ‘ಮಿಲ್ಕ್‌ಬ್ಯಾಂಕ್’ನಲ್ಲಿ ಸಂಗ್ರಹವಾಗುವ ತಾಯಂದಿರ ಹಾಲು ಸಂಸ್ಕರಿಸಿ ಅವಧಿ ಮುನ್ನ ಜನಿಸಿರುವ ಶಿಶುಗಳಿಗೆ, ಅಸ್ವಸ್ಥ ಶಿಶುಗಳಿಗೆ, ಅನಾಥ ಶಿಶುಗಳಿಗೆ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೋಗಗ್ರಸ್ಥ ಬಾಣಂತಿಯರ ಶಿಶುಗಳಿಗೆ ಹಾಗೂ ಮೃತಪಟ್ಟ ತಾಯಂದಿರ ಶಿಶುಗಳಿಗೆ ನೀಡುವುದಕ್ಕೆ ಬಿಮ್ಸ್ ವೈದ್ಯಕೀಯ ಸಿಬ್ಬಂದಿ ಅಣಿಯಾಗಿದ್ದಾರೆ. ತಾಯಿ ಹಾಲು ಬೇಕಾದವರು ಮಿಲ್ಕ್‌ಬ್ಯಾಂಕ್ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 ಹಾಲನ್ನು ದಾನ ಮಾಡಬಹುದು:
 ದಾನಿಗಳಿಂದ ತಾಯಿಯ ಹಾಲನ್ನು ಸರಿಯಾದ ರೀತಿಯಲ್ಲಿ ಪಡೆದು ಶೇಖರಿಸಲಾಗುತ್ತದೆ. ಹಾಲನ್ನು ಪಡೆಯುವ ಮುನ್ನ ತಾಯಿಯ ಅನುಮತಿ ಪಡೆಯಲಾಗುತ್ತದೆ. ಅಲ್ಲದೆ ತಾಯಿಗೆ ಅವವ್ಯವಿರುವ ರಕ್ತ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಯಾವುದೇ ಸೋಂಕುಗಳು ದಾನಿಯಾದ ತಾಯಿಗೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಸ್ವಯಂ ಪ್ರೇರಿತ ದಾನಿಗಳು, ಮಗುವನ್ನು ಕಳೆದುಕೊಂಡ ತಾಯಂದಿರು, ಕೆಲಸಕ್ಕೆ ಹೋಗುವ ತಾಯಂದಿರು ಹಾಲನ್ನು ದಾನ ಮಾಡಬಹುದಾಗಿದೆ. ತಾಯಿಯ ಹಾಲನ್ನು -20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಿಸಿ ಒಂದು ದಿನದ ನಂತರ 3-5 ತಾಯಂದಿರ ಹಾಲನ್ನು ಒಟ್ಟುಗೂಡಿಸಿ ಪ್ಯಾಷ್ಚರೀಕರಣ ಮಾಡಲಾಗುತ್ತದೆ. ಇದರಿಂದ ಹಾಲಿನ ಪೌಷ್ಠಿಕಾಂಶವನ್ನು ಸಮ ಪ್ರಮಾಣದಲ್ಲಿ ಹಂಚಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net