

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಯಿ ಬದುಕಿನ ಜೀವನಾಡಿ. ಅವಳದು ಯಾವುದೇ ದುರಾಸೆಯಿಲ್ಲದ ಪ್ರೀತಿ. ತಾಯಿಯ ಪ್ರೀತಿ-ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕವಿ ಡಾ. ದಿವಾಕರ ಹೆಗಡೆ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಶ್ರೇಷ್ಠ ತಾಯಿ ಸನ್ಮಾನ ಕಾರ್ಯಕ್ರಮದಲ್ಲಿ ಅಮ್ಮನೆಂಬ ಅಂತರಂಗ ಕುರಿತು ಮಾತನಾಡಿದರು.
ಭೂಮಿಯ ಮೇಲೆ ತಾಯಿ ಮಕ್ಕಳ ಸಂಬಂಧ ಸೃಷ್ಟಿ ಪರಂಪರೆಯ ಸಂಕೇತ. ಭೂಮಿ, ಭಾಷೆ ಹಾಗೂ ನೀರನ್ನು ಸಹ ತಾಯಿ ಎಂದು ಪೂಜ್ಯ ಭಾವನೆಯಿಂದ ಕಾಣುತ್ತೇವೆ. ದೇವರು ಎಲ್ಲ ಕಡೆಗಳಲ್ಲಿ ಇರಲು ಸಾಧ್ಯವಿಲ್ಲದ್ದಕ್ಕೆ ತಾಯಿಯನ್ನು ಸೃಷ್ಟಿಸಿದ. ದೇವರ ಮತ್ತೊಂದು ರೂಪವೇ ಅಮ್ಮ. ತನಗಾಗಿ ಏನನ್ನೂ ಬಯಸದ ತಾಯಿ ನಿಜವಾದ ತ್ಯಾಗಮಯಿ. ಇಂದಿನ ಆಧುನಿಕತೆ ಭರಾಟೆಯಲ್ಲಿ ತಾಯ್ತನವನ್ನೇ ತಿರಸ್ಕರಿಸುತ್ತಿರುವುದು ವಿಪರ್ಯಾಸ. ಇದೊಂದು ದುರಂತವೇ ಸರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ದೇಶಪಾಂಡೆ ದತ್ತಿ ಮೂಲಕ ತಾಯಿಯನ್ನು ಸ್ಮರಿಸುವುದು ಪುಣ್ಯದ ಕಾರ್ಯ. ನಿಜವಾಗಿ ತಾಯಿ ಆ ದೇವರು ನಮಗೆ ನೀಡಿದ ದೊಡ್ಡ ಆಸ್ತಿ. ತಾಯಿ ಇಲ್ಲದ ಜೀವನ ಜೀವನವೇ ಅಲ್ಲ ಎಂದರು.
ದತ್ತಿದಾನಿ ಡಾ. ರಾಜನ್ ದೇಶಪಾಂಡೆ ದತ್ತಿ ಆಶಯ ಕುರಿತು ಮಾತನಾಡಿದರು. ಅನುರಾಧ ವೆಂಕಟೇಶ್ ಪ್ರಭು ಅವರಿಗೆ ಶ್ರೇಷ್ಠ ತಾಯಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಎಂ.ಎಂ. ಚಿಕ್ಕಮಠ, ಶಾಂತವೀರ ಬೆಟಗೇರಿ, ಎಸ್,ಜಿ. ನಾಡಿಗೇರ, ಶಿವಾನಂದ ಹೂಗಾರ, ಇತರರು ಇದ್ದರು.