

ಮೈಸೂರು: ನಗರದ ಹಿನಕಲ್‌ನಲ್ಲಿರುವ ಹಿರಿಯ ಜೀವಿಗಳ ಆಶ್ರಯ ತಾಣವಾದ ವಾತ್ಸಲ್ಯ ಸೇವಾ ಕೇಂದ್ರದಲ್ಲಿ ಸೋಮವಾರ ವಿಶ್ವ ತಾಯಂದಿರ ದಿನ ಆಚರಿಸಲಾಯಿತು.
ಹಿರಿಯ ಶುಶ್ರೂಷಕಿ ನಾಗರತ್ನಾ ಮಾತನಾಡಿ, ಸಮಾಜದಲ್ಲಿ ತಾಯಿಗೆ ಮಹತ್ವದ ಸ್ಥಾನವಿದೆ. ತಾಯಿಗಿಂತ ಮಿಗಿಲಾದ ದೇವರಿಲ್ಲ. ತಾಯಿಯೇ ಮೊದಲ ಗುರುವೂ ಹೌದು. ತಾಯಿಯ ಋಣವನ್ನು ನಾವು ಎಂದೆಂದಿಗೂ ತೀರಿಸಲು ಅಸಾಧ್ಯ. ತಾಯಿ ಮಾತೃಹೃದಯಿ, ವಾತ್ಸಲ್ಯಮಯಿ, ಮಮತೆಯ ಗಣಿ. ತಾಳ್ಮೆಗೆ ಮತ್ತೊಂದು ಹೆಸರೇ ವಾತ್ಸಲ್ಯಮಯಿ ಅವ್ವ ಎನ್ನಬಹುದು. ಮನೆಯಲ್ಲಿ ತಾಯಿಯಾದವಳು ಮಕ್ಕಳಿಗೆ ಒಳ್ಳೆಯ ಆಚಾರ, ವಿಚಾರ, ಸಂಸ್ಕೃತಿಯನ್ನು ಕಲಿಸಬಲ್ಲ ಮೊದಲ ಶಿಕ್ಷಕಿಯೂ ಆಗಿರುತ್ತಾಳೆ. ತಾಯಿ ಎನ್ನುವ ಎರಡಕ್ಷರಕ್ಕೆ ಅಗಾಧ ಶಕ್ತಿ ಇದೆ. ನಾವು ತಾಯಿಗೆ ಗೌರವವನ್ನು ಕೊಡುವುದರ ಜತೆಗೆ, ಹಿರಿಯ ವಯಸ್ಸಿನಲ್ಲಿ ಇರುವವರಿಗೆ ನೆರಳಾಗಿ ಆರೈಕೆ ಮಾಡಿ ಅವರ ಮನಸ್ಸನ್ನು ಸಂತೋಷಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ವಾತ್ಸಲ್ಯ ಸೇವಾ ಫೌಂಡೇಷನ್‌ನ ಅಧ್ಯಕ್ಷ ಎ.ಸಿ.ರವಿಕುಮಾರ್ ಮಾತನಾಡಿ, ಹಿರಿಯ ಜೀವಿಗಳ ಮನಸ್ಸನ್ನು ನೋಯಿಸದೆ ಅವರನ್ನು ಆರೋಗ್ಯವಂತರನ್ನಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶ್, ಸಂಘಟಕಿ ಶಶಿಕಲಾ, ಆಶ್ರಮದ ಹಿರಿಯರು ಇದ್ದರು.