

ಬೆಟ್ಟದಪುರ: ಶಿಶು ಆರೋಗ್ಯಕರವಾಗಿರಬೇಕೆಂದರೆ ತಾಯಿಯ ಎದೆಹಾಲನ್ನು ಕಡ್ಡಾಯವಾಗಿ ಕುಡಿಸಲೇಬೇಕು. ಅಲ್ಲದೆ ಶಿಶುವಿನ ಬೆಳವಣಿಗೆ ಪ್ರಮಾಣದಲ್ಲಿ ಸ್ತನ್ಯಪಾನವು ಅತ್ಯಂತ ಅವಶ್ಯಕ ಭಾಗವಾಗಿದೆ. ತಾಯಿಯ ಎದೆಹಾಲನ್ನು ಅಮೃತಕ್ಕೆ ಸಮ ಎಂದು ಚಪ್ಪರದಹಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್.ಸಂದೀಪ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಿಂದ ಶಿಶುಗಳನ್ನು ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕಗಳನ್ನು ತಾಯಿಯ ಎದೆ ಹಾಲು ಹೊಂದಿರುತ್ತದೆ. ಮಗುವಿಗೆ ಅತ್ಯುತ್ತಮ ಪೋಷಣೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೆ ಮಗುವಿನ ಅರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಹೊಂದಿದ್ದು, ಇದು ಮಗುವಿನ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿನ ನಡುವಿನ ವಾತ್ಸಲ್ಯ, ಬಾಂಧವ್ಯ ಮತ್ತು ಪ್ರೀತಿ ಸಹ ಗಟ್ಟಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರವಿ ಎಚ್.ಎಸ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಚೈತ್ರಾ ಹಾಗೂ ಆಶಾ ಕಾರ್ಯಕರ್ತೆಯರಾದ ಭಾರತೀ, ದೇವೀರಮ್ಮ, ಸಿಬ್ಬಂದಿ ಗೀತಾ ಇತರರು ಇದ್ದರು.