ತಾಯಂದಿರು ಸಂಸ್ಕೃತಿಯ ರಕ್ಷಕರು

ತಾಯಂದಿರು ಸಂಸ್ಕೃತಿಯ ರಕ್ಷಕರು
Published on

ಶನಿವಾರಸಂತೆ: ತಾಯಂದಿರು ದೇಶದ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯ ಹರಿಕಾರರು ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯಪಟ್ಟರು.

ಸಮೀಪದ ಗಣಗೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಸವೇಶ್ವರಸ್ವಾಮಿಯ ದೇವಸ್ಥಾನದ ಉದ್ಘಾಟನೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ದೇಶ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಯ ಪರಂಪರೆ ಹೊಂದಿರುವ ರಾಷ್ಟ್ರವಾಗಿದೆ. ಇಂಥಹ ಸಂಸ್ಕಾರ, ಸಂಸ್ಕೃತಿಯನ್ನು ತಾಯಿ ಕಲಿಸಿಕೊಡುವುದರಿಂದ ನಮ್ಮ ದೇಶದಲ್ಲಿ ತಾಯಂದಿರಿಗೆ ಪ್ರಮುಖ ಸ್ಥಾನವಿದೆ ಎಂದರು.

ನಮ್ಮ ದೇಶ ವಿಜ್ಞಾನ, ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸಿದೆ. ಆದರೂ ನಮ್ಮ ವಿಜ್ಞ್ಞಾನಿಗಳು ಆಧ್ಯಾತ್ಮಿಕತೆ ಮೈಗೂಢಿಸಿಕೊಳ್ಳುವ ಮೂಲಕ ದೇಶದ ಧಾರ್ಮಿಕ ಸಂಸ್ಕೃತಿಯನ್ನು ಮರೆತಿಲ್ಲ ಎಂದರು. ಸಮಾಜ ಎಷ್ಟೇ ಆಧುನಿಕವಾಗಿ ಬದಲಾದರೂ ಮಾನವೀಯ ಗುಣ, ಸಂಸ್ಕಾರ, ಸಂಸ್ಕೃತಿ, ಧಾರ್ಮಿಕ, ಆಚಾರ, ವಿಚಾರಗಳು ಬದಲಾಗಬಾರದು. ಇವುಗಳಿಂದ ಸಮಾಜವು ಸಂಸ್ಕಾರಗೊಳ್ಳುತ್ತದೆ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ನಮಗೆ ದೇಗುಲಗಳಲ್ಲಿ ಶಾಂತಿ ನೆಮ್ಮದಿ ಮತ್ತು ಶಾಲೆಗಳಲ್ಲಿ ಜ್ಞಾನ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಊರುಗಳಲ್ಲಿ ಧಾರ್ಮಿಕ ಆಚರಣೆಗೆ ದೇವಾಲಯಗಳಿರಬೇಕು. ಪ್ರತೀ ಊರಿನಲ್ಲೂ ಶಾಲೆಗಳು ವೃದ್ಧಿಸಬೇಕು ಎಂದರು.

ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ನಾವು ವೈಜ್ಞಾನಿಕವಾಗಿ ಸಮಾಜವನ್ನು ಬೆಳೆಸುತ್ತೇವೆ ಹೊರತು ಪರಿಸರವನ್ನು ಬೆಳೆಸಲು ಹೋಗುವುದಿಲ್ಲ. ಸ್ವಾರ್ಥಕ್ಕಾಗಿ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಮರಗಿಡವನ್ನು ಕಡಿಯುತ್ತೇವೆ. ಇದರಿಂದ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಧಾರ್ಮಿಕತೆ ಜತೆಗೆ ಪರಿಸರವನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈ ಸಮಾಜದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಧಾರ್ಮಿಕ ಕೇಂದ್ರಗಳಿಂದ ನಾವು ಸಂಸ್ಕಾರ, ಸಹಬಾಳ್ವೆ, ಒಗ್ಗಟ್ಟು ಮುಂತಾದ ಮಹತ್ವದ ಗುಣಗಳನ್ನು ಕಲಿಯಬಹುದು. ಈ ನಿಟ್ಟಿನಲ್ಲಿ ಪ್ರತಿಯೊಂದು ಊರುಗಳಲ್ಲಿ ದೇವಾಲಯಗಳು ನಿರ್ಮಾಣ ಆಗಬೇಕಿದೆ ಎಂದರು.

ಶಿರಧನಹಳ್ಳಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಎಸಿಎಫ್ ಎ.ಎ.ಗೋಪಾಲ್, ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅಂಕನಹಳ್ಳಿ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಜಿ.ಪರಮೇಶ್ ಆದ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಸದಸ್ಯ ಎಂ.ಎಸ್.ಪ್ರದೀಪ್ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net