ಮೈಸೂರಿನಲ್ಲಿ ಮದರ್‌ಹುಡ್ ಆಸ್ಪತ್ರೆ ಕಾರ್ಯಾರಂಭ

Motherhood Hospital inaugurated in Mysore
Published on

ಮೈಸೂರು: ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಸಮೂಹವಾಗಿರುವ ‘ಮದರ್‌ಹುಡ್ ಆಸ್ಪತ್ರೆ’ ನಗರದ ಯಾದವಗಿರಿಯಲ್ಲಿ ಗುರುವಾರ ಲೋಕಾರ್ಪಣೆಗೊಂಡಿತು.

‘ಮದರ್‌ಹುಡ್ ಆಸ್ಪತ್ರೆ’ಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಎಲ್ಲ ರೀತಿಯ ಅತ್ಯಾಧುನಿಕ ಆರೋಗ್ಯ ಸೇವೆಗಳು ದೊರೆಯಲಿದೆ. ಆಸ್ಪತ್ರೆಯಲ್ಲಿ ನುರಿತ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ನಿಯೋನ್ಯಾಟೋಲಾಜಿಸ್ಟ್‌ಗಳ ತಂಡವಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲ ಸೌಕರ್ಯವನ್ನು ಹೊಂದಿದೆ.

ಆಸ್ಪತ್ರೆಯನ್ನು ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿ ಮಾತನಾಡಿ, ಬೆಂಗಳೂರು , ಮುಂಬೈ, ನವದೆಹಲಿ ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಮಾತ್ರ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತದೆ. ಆದರೆ, ಎರಡನೇ ಹಂತದ ನಗರಗಳಾಗಿರುವ ಮೈಸೂರು ಮುಂತಾದ ನಗರಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ದೊರೆಯುವುದು ಕಡಿಮೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲೂ ಸಹ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಯಾವುದೇ ಒಂದು ನಗರದಲ್ಲಿ ಆಸ್ಪತ್ರೆ ಕಾರ್ಯಾರಂಭಗೊಂಡರೆ ಆ ನಗರಕ್ಕೆ ಒಂದು ದೇವಸ್ಥಾನ ಬಂದ ಹಾಗೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಮಹಿಳೆ ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಮದರ್‌ಹುಡ್ ಆಸ್ಪತ್ರೆ ನಗರದಲ್ಲಿ ಕಾರ್ಯಾರಂಭಗೊಂಡಿರುವುದು ಸಂತಸದ ವಿಚಾರ ಎಂದರು.

ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ ಹಾಗೂ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಮೈಸೂರು ರಾಜಮನೆತನ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಜನರು ಭಯದಿಂದ ಕೋವಿಡ್ ಲಸಿಕೆ ಪಡೆಯಲು ಪ್ರಾರಂಭದಲ್ಲಿ ಹಿಂದೇಟು ಹಾಕಿದರು. ಸಿಡುಬು ಕಾಣಿಸಿಕೊಂಡ ಸಂದರ್ಭದಲ್ಲೂ ಅಂತಹದ್ದೇ ಭಯ ಇತ್ತು. ಆ ಸಂದರ್ಭ ಮಹಾರಾಣಿ ಲಕ್ಷ್ಮಮ್ಮಣಿ ಅವರು ಬಯಲು ಪ್ರದೇಶಕ್ಕೆ ಬಂದು ಎಲ್ಲರ ಮುಂದೆ ಲಸಿಕೆ ಪಡೆದು ಜನರ ಭಯ ಹೋಗಲಾಡಿಸುವ ಪ್ರಯತ್ನ ಮಾಡಿದರು ಎಂದು ಹೇಳಿದರು.

ಆಸ್ಪತ್ರೆಯ ಸಿಇಒ ವಿಜಯರತ್ನ ವೆಂಕಟರಾಮನ್ ಮಾತನಾಡಿ, ಮದರ್‌ಹುಡ್ ಅಸ್ಪತ್ರೆಯಲ್ಲಿ ನಾವು ಯಾವಾಗಲೂ ನಮ್ಮ ರೋಗಿಗಳು ಮತ್ತು ಅವರ ಕುಟುಂಬದವರಿಗೆ ನಿರೀಕ್ಷೆಗೂ ಮೀರಿದ ಆರೋಗ್ಯ ರಕ್ಷಣಾ ಸೇವೆಯನ್ನು ನೀಡುವ ಗುರಿ ಹೊಂದಿದ್ದೇವೆ. ಮಹಿಳೆಯರು ಮತ್ತು ಮಕ್ಕಳಿಗೆ ಮನೆಯಲ್ಲಿ ದೊರೆಯುವಂತಹ ಆರಾಮದಾಯಕ ವಾತಾವರಣದ ಅವಶ್ಯಕತೆ ಇರುತ್ತದೆ. ಅಂತಹ ಒಂದು ವಾತಾವರಣವನ್ನು ನಮ್ಮ ಆಸ್ಪತ್ರೆಯಲ್ಲಿ ಕಲ್ಪಿಸುತ್ತಿದ್ದೇವೆ ಎಂದರು.

ಮೈಸೂರಿನಲ್ಲಿ ಮದರ್‌ಹುಡ್ ಆಸ್ಪತ್ರೆ ಕಾರ್ಯಾರಂಭದಿಂದ ನೆರೆಯ ಹಾಸನ, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ. ನಮ್ಮ ಆಸ್ಪತ್ರೆಯಲ್ಲಿ ಪ್ರಸವ ಆರೈಕೆ, ಸ್ತ್ರೀರೋಗ, ಲ್ಯಾಪರೋಸ್ಕೋಪಿಕ್ ಸರ್ಜರಿ, ಸಂತಾನೋತ್ಪತಿ, ನಿಯೋನ್ಯಾಟೋಲಾಜಿ, ಮಕ್ಕಳ ಆರೋಗ್ಯ ಸೇರಿದಂತೆ ಇನ್ನಿತ ಕ್ಷೇತ್ರಗಳಲ್ಲಿ ಅತ್ಯಂತ ಅನುಭವ ಹೊಂದಿದ ವೈದ್ಯರ ತಂಡವಿದೆ. ಮಹಿಳೆಯರು ಮತ್ತು ಮಕ್ಕಳ ಎಲ್ಲ ರೀತಿಯ ಆರೋಗ್ಯ ಸೇವೆಯನ್ನು ನಮ್ಮ ಆಸ್ಪತ್ರೆ ಒದಗಿಸುತ್ತದೆ. ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸಹಜ ಹೆರಿಗೆ ಉತ್ತಮ. ನಮ್ಮ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಮದರ್‌ಹುಡ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಅತ್ಯಾಧುನಿಕ ಆರೈಕೆ ದೊರೆಯುತ್ತದೆ. ನಮ್ಮಲ್ಲಿ ನಿಯೋನಾಟಲ ಕೇರ್ ಯ ಊನಿಟ್ (ಎನ್‌ಐಸಿಯು) ಇದ್ದು, ಎನ್‌ಐಸಿಯು ಮೂಲಕ ಇದುವರೆಗೆ 14,00ಕ್ಕೂ ಹೆಚ್ಚು ನವಜಾತ, ಅವಧಿಪೂರ್ವ ಜನಿಸಿ ಶಿಶುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net