

ಲೋಕಾಪುರ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ಹಾಗೂ ಆಸ್ತಿ ವಿವಾದ ಹಿನ್ನೆಲೆ ತಾಯಿಯೇ ತನ್ನ ಪುತ್ರನನ್ನು ಕೊಲೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದ ವಸಂತ ಮಹಾಲಿಂಗಪ್ಪ ಕುರಬಳ್ಳಿ (24) ಕೊಲೆಯಾದ ಯುವಕ.
ಮೂಡಲಗಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಲಕ್ಷ್ಮಣ ಊರ್ಫ್ ಸಿಂಧೂರ ಬೀರನ್ನವರ, ಗೋಕಾಕ ತಾಲೂಕಿನ ವೆಂಕಟಾಪುರ ಗ್ರಾಮದ ಭೀಮಪ್ಪ ಮಳಲಿ, ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನಿಂಗಪ್ಪ ಬಳಗನ್ನವರ ಅವರನ್ನು ಲೋಕಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕೊಲೆ ಮಾಡಿಸಿದ ತಾಯಿ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ.
ಘಟನೆ ವಿವರ : ಆರೋಪಿ ನಿಂಗಪ್ಪ ಬಳಗನ್ನವರ ಜತೆ ಕೊಲೆಯಾದ ವಸಂತನ ತಾಯಿ ಕಮಲವ್ವ ಕುರಬಳ್ಳಿಗೆ ಅನೈತಿಕ ಸಂಬಂಧ ಇತ್ತು. ವಸಂತನ ಇಬ್ಬರ ಅಕ್ಕಂದಿರ ಗಂಡಂದಿರಾದ ಲಕ್ಷ್ಮಣ, ಭೀಮಪ್ಪ ಇಬ್ಬರು ತಮ್ಮ ಪತ್ನಿಯರ ಹೆಸರಿಗೆ ವಸಂತ ಆಸ್ತಿ ನೋಂದಣಿ ಮಾಡಲು ಒಪ್ಪಿಗೆ ನೀಡಿದ್ದಿಲ್ಲ. ನಾಲ್ವರು ಆರೋಪಿಗಳು ಸೇರಿ ವಸಂತನನ್ನು ಜೂ.19 ರಂದು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿಕೊಂಡು ಸವದತ್ತಿ ತಾಲೂಕಿನ ದಾಸನಾಳ ಗ್ರಾಮದ ಕಾಲುವೆಯಲ್ಲಿ ಎಸೆದು ಬಂದಿದ್ದರು. ನಂತರ ತಾಯಿಯೇ ಜುಲೈ 6 ರಂದು ಮಗ ಕಾಣೆಯಾಗಿದ್ದಾನೆಂದು ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.
ಒಂದೇ ದಿನದಲ್ಲಿ ಬಂಧನ : ಕೊಲೆಯಾದ ವಸಂತನ ಪತ್ನಿ ಭಾಗ್ಯಶ್ರೀ ಕುರಬಳ್ಳಿ ತನ್ನ ಗಂಡನನ್ನು ಅತ್ತೆ ಹಾಗೂ ನಾದಿನಿಯರ ಗಂಡಂದಿರು ಕೊಲೆಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಎಲ್ಲಿಯೋ ಒಗೆದು ಮುಚ್ಚಿಹಾಕಿರುತ್ತಾರೆ ಎಂದು ಜುಲೈ 30 ರಂದು ದೂರು ನೀಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಮಾರ್ಗದರ್ಶನದಲ್ಲಿ ಮುಧೋಳ ಸಿಪಿಐ ಅಯ್ಯನಗೌಡ ಪಾಟೀಲ ಹಾಗೂ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಜಗದೀಶ ಕಾಂತಿ, ಜಿ.ಎಂ. ಕ್ಯಾತನ್, ಎಸ್.ಎಸ್. ಗಾಳಿ, ಎಂ.ಎಸ್. ಗುಲಗಾಲಜಂಬಗಿ, ಸಾತಪ್ಪ ಗಂಗಾಯಿ, ಆರ್.ಬಿ. ಗಲಗಲಿ, ಚಂದ್ರಶೇಖರ ಬಡಿಗೇರ, ಮೌನೇಶ ಪತ್ತಾರ, ದಾದಾಪೀರ ಅತ್ರಾವತ್ತ, ಬಸವರಾಜ ತಂಗಡಿ ಅವರ ಕರ್ತವ್ಯ ಶ್ಲಾಸಿ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಎಸ್‌ಪಿ ಬಹುಮಾನ ಘೋಷಿಸಿದ್ದಾರೆ.