ಉನ್ನತ ಶಿಕ್ಷಣಕ್ಕೆ ಮಾತೃ ಭಾಷೆ ಸಜ್ಜುಗೊಳಿಸಬೇಕು : ಪ್ರೊ.ಜಿ.ಕೆ. ಫಣಿಕರ್ ಸಲಹೆ

CIIL
Published on

ಮೈಸೂರು: ಉನ್ನತ ಶಿಕ್ಷಣಕ್ಕೆ ಮಾತೃಭಾಷೆಯನ್ನು ಸಜ್ಜುಗೊಳಿಸುವ ತುರ್ತು ಅವಶ್ಯಕತೆ ನಿರ್ಮಾಣವಾಗಿದ್ದು, ಭಾರತೀಯ ಭಾಷಾ ಸಂಸ್ಥಾನ ಇದರ ನಾಯಕತ್ವ ವಹಿಸಬೇಕು ಎಂದು ತಿರುವನಂತಪುರಂನ ಅಂತಾರಾಷ್ಟ್ರೀಯ ದ್ರಾವಿಡ ಭಾಷಾ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಜಿ.ಕೆ. ಫಣಿಕರ್ ಸಲಹೆ ನೀಡಿದರು.

ನಗರದ ಭಾರತೀಯ ಭಾಷಾ ಸಂಸ್ಥಾಾನದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಥೆಯ 57ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಪ್ರಮುಖ ಭಾಷೆಗಳಲ್ಲಿ ಅಸ್ತಿತ್ವದಲ್ಲಿರುವ ಪಠ್ಯ ಪುಸ್ತಕಗಳು ಮತ್ತು ಲೇಖನಗಳನ್ನು ಅನುವಾದ ಮಾಡುವ ಕಾರ್ಯ ಆಗಬೇಕು. ಅದೇ ರೀತಿ ವಿದೇಶಿ ಭಾಷೆಗಳಿಂದ ಭಾರತೀಯ ಭಾಷೆಗಳಿಗೆ ಭಾಷಾಂತರಾ ಕಾರ್ಯ ಮತ್ತು ಭಾರತೀಯ ಭಾಷೆಗಳಲ್ಲಿಯೇ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಪ್ರಮುಖ ಕೃತಿಗಳ ಸ್ವಯಂಚಾಲಿತ ಅನುವಾದಗಳಿಗೆ ವ್ಯವಸ್ಥೆೆ ಕಲ್ಪಿಸಬೇಕು ಎಂದು ಹೇಳಿದರು.

ನಮ್ಮ ದೇಶದ ಪ್ರತಿಯೊಂದು ಭಾಷೆಯನ್ನು ಮೌಲ್ಯೀಕರಿಸಬೇಕು. ಪ್ರತಿಯೊಂದು ಭಾಷೆಯನ್ನು ಗೌರವಿಸಬೇಕು ಜತೆಗೆ ಅವುಗಳನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕು. ಇದಕ್ಕೆ ಒಗ್ಗಟ್ಟು, ಪರಸ್ಪರ ತಿಳುವಳಿಕೆ ಮತ್ತು ಎಲ್ಲರೂ ಒಳಗೊಳ್ಳುವಿಕೆಯ ವಾತಾವರಣವನ್ನು ಸೃಷ್ಟಿಸಬೇಕು. ಭಾಷಾ ಸೂತ್ರವನ್ನು ಅನೇಕರು ಸ್ಪಷ್ಟವಾಗಿ ಗ್ರಹಿಸುವುದಿಲ್ಲ. ದಕ್ಷಿಣ ರಾಜ್ಯಗಳಿಂದ ಮಾತ್ರವಲ್ಲದೇ ಉತ್ತರದ ಅನೇಕ ರಾಜ್ಯಗಳಿಂದಲೂ ಸಂದೇಹಗಳು ಉದ್ಭವಿಸುತ್ತವೆ. ಭಾಷೆಯ ವಿಷಯವು ಬಹಳ ಸೂಕ್ಷ್ಮವಾಗಿದ್ದು, ತೀವ್ರ ಕಾಳಜಿಯ ಅಗತ್ಯವಿದೆ. ಭಾಷಾ ಸೂತ್ರದ ಬಗ್ಗೆೆ ಜನರಲ್ಲಿನ ಅನುಮಾನಗಳನ್ನು ತೆಗೆದುಹಾಕುವುದು ಪ್ರಮುಖ ಆದ್ಯತೆಯಾಗಬೇಕು ಎಂದರು.

ಭಾಷಾ ಸಂಚಿಕಾ ಪೋರ್ಟಲ್ ಅನಾವರಣಗೊಳಿಸಿದ ಪುಣೆಯ ಡೆಕ್ಕನ್ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿ ಪ್ರೊ.ಪ್ರಸಾದ್ ಜೋಶಿ ಮಾತನಾಡಿ, ದೇಶದಲ್ಲಿ ಭಾಷಾ ವೈವಿಧ್ಯತೆ ಉಳಿಸಲು ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಗೌರವಿಸುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಪ್ರತಿ ಭಾಷೆಯೂ ಮತ್ತೊಂದು ಭಾಷೆಯ ಜತೆಗೆ ಸೌಹಾರ್ದ ಸಂಬಂಧ ಹೊಂದಿದ್ದು, ಸೋದರ ಬಾಂಧವ್ಯ ಸಹ ಇದೆ. ಕಡಿಮೆ ಸಂಖ್ಯೆಯಲ್ಲಿ ಮಾತನಾಡುವ ಸಣ್ಣ ಭಾಷೆಗಳ ಭಾಷಿಕರ ಹಕ್ಕುಗಳನ್ನು ರಕ್ಷಿಸಬೇಕು. ಪ್ರಾಚೀನ ಭಾರತದಲ್ಲಿ ಭಾಷಾ ತಜ್ಞರು, ಕವಿಗಳು ಭಾಷೆಯನ್ನು ಉಳಿಸಿದ ಬಗೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಭಾರತೀಯ ಭಾಷಾ ಸಂಸ್ಥಾನದ ಅಧ್ಯಕ್ಷ ಪ್ರೊ.ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಭಾಷಾ ಸಂಸ್ಥಾನದ ನಿವೃತ್ತ ನಿರ್ದೇಶಕ ಪ್ರೊ.ರಾಜೇಶ್ ಸಚ್‌ದೇವ್, ಪ್ರೊ.ಸಿ.ಜಿ.ವೆಂಕಟೇಶಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net