

ಚಿಕ್ಕಮಗಳೂರು: ತಾಲೂಕಿನ 1300ಕ್ಕೂ ಹೆಚ್ಚು ಆಟೋ ಚಾಲಕರಿಗೆ ವಸತಿ ಕಲ್ಪಿಸಿ ಎಂದು ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಜಗದೀಶ್ ಮರೇಬೈಲ್ ಮನವಿ ಮಾಡಿದರು.
ಗವನಹಳ್ಳಿಯಲ್ಲಿ ರಾಂಪುರ ಶ್ರೀ ಚಿಂತಾಮಣಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ಗುರುವಾರ ಆಯೋಜಿಸಿದ್ದ 65 ನೇ ರಾಜ್ಯೋತ್ಸವದಲ್ಲಿ ಮಾತನಾಡಿದರು.
ನಗರದಲ್ಲಿ 1800, ಗ್ರಾಮಾಂತರದಲ್ಲಿ 600 ಸೇರಿ ತಾಲೂಕಿನಲ್ಲಿ 2400ಕ್ಕೂ ಹೆಚ್ಚು ಆಟೋ ಚಾಲಕರಿದ್ದು ಇವರಲ್ಲಿ 1300ಕ್ಕೂ ಹೆಚ್ಚು ಮಂದಿ ಬಾಡಿಗೆ ಮನೆಯಲ್ಲಿದ್ದಾರೆ. ಹಾಗಾಗಿ ಮನೆ ಕಟ್ಟಿಕೊಟ್ಟರೆ ಅನುಕೂಲವಾಗುತ್ತದೆ ಎಂದು ಸಚಿವರಿಗೆ ಮನವಿ ನೀಡಲಾಗಿದ್ದು ಸ್ಪಂದಿಸುವ ಭರವಸೆ ನೀಡಿದ್ದಾರೆ. ಸಂಘದ ಕಾರ್ಯ ಚಟುವಟಿಕೆಗೆ ಕಚೇರಿ ಅವಶ್ಯವಿದ್ದು ಸಿಡಿಎಯಿಂದ ನಿವೇಶನ ನೀಡಿದರೆ ಸಹಕಾರವಾಗುತ್ತದೆ ಎಂದರು.
ಸಿಡಿಎ ಅಧ್ಯಕ್ಷ ಸಿ.ಆನಂದ್ ಮಾತನಾಡಿ, ಕನ್ನಡ ನಾಡು, ನುಡಿ, ಭಾಷೆ ಉಳಿವಿನಲ್ಲಿ ಆಟೋ ಚಾಲಕರ ಪಾತ್ರ ಹೆಚ್ಚಿದೆ. ಸಂಘದ ಚಟುವಟಿಕೆಗಾಗಿ ಸಿಡಿಎನಿಂದ ಸಿಎ ಸೈಟ್ ನೀಡುವ ಭರಸವೆ ನೀಡಿದರು. ರಾಂಪುರದಲ್ಲಿ ಹತ್ತಾರು ಜಾತಿಗಳ ಗ್ರಾಮಸ್ಥರು ಒಗ್ಗೂಡಿ ಯಾವುದೆ ಭೇದವಿಲ್ಲದೆ ರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕರೊನಾ ತಡೆ ನಿಯಮಗಳನ್ನು ಪಾಲಿಸಿ ಅನ್ನದಾನದ ಮೂಲಕ ಕನ್ನಡದ ತೇರು ಎಳೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ತಾಯಿಯನ್ನು ಪ್ರೀತಿಸುವಷ್ಟೇ ಮಾತೃಭಾಷೆಯನ್ನೂ ಪ್ರೀತಿಸಿ ಗೌರವಿಸಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಯಶೋದಾರಾಜ್ ಅರಸ್, ತುಳಸಿರಾಜ್, ಸತೀಶ್, ಬಿಜೆಪಿ ಮುಖಂಡರಾದ ವೀಣಾ ರತ್ನಾಕರ್, ಆಟೋಚಾಲಕರ ಸಂಘದ ನಾಗರಾಜ್, ಅರುಣ್, ಪ್ರಕಾಶ್ ಬೋಜರಾಜ್, ಕೌಶಿಕ್, ಪುರುಷೋತ್ತಮ್ ಇದ್ದರು.