

ಮೈಸೂರು: ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ರಾಜ್ಯಭಾಷೆ(ಮಾತೃಭಾಷೆ) ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂದು ನವದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದ ನಿವೃತ್ತ ಭಾಷಾ ವಿಜ್ಞಾನಿ ಪ್ರೊ.ಕಪಿಲ್ ಕಪೂರ್ ಪ್ರತಿಪಾದಿಸಿದರು.
ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ವರ್ಚ್ಯುವಲ್ ವೇದಿಕೆ ಮೂಲಕ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ನಾನು ನೂತನ ಶಿಕ್ಷಣ ನೀತಿ ರಚನೆ ಸಂದರ್ಭ ಸಲಹೆ ನೀಡಿದ್ದೆ. ಆದರೆ, ಆ ಸಲಹೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಮಕ್ಕಳು ಮಾತೃಭಾಷೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಶಾಲೆಯಲ್ಲೂ ಅದೇ ಭಾಷೆಯಲ್ಲಿ ಶಿಕ್ಷಣ ದೊರೆತರೆ ಮಕ್ಕಳು ಉತ್ತಮವಾಗಿ ಕಲಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.
1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡಬೇಕು. ವಿಜ್ಞಾನ ಶಿಕ್ಷಣವನ್ನು ಸಹ ಮಾತೃಭಾಷೆಯಲ್ಲಿ ನೀಡಬಹುದು. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಪರ್ಯಾಯ ಪದಗಳ ಸಂಪತ್ತು ನಮ್ಮ ಭಾರತೀಯ ಭಾಷೆಗಳಲ್ಲಿವೆ. ಸಂಸ್ಕೃತವು ಎಲ್ಲ ಭಾಷೆಗಳಿಗೆ ಪದ ಸಂಪತ್ತನ್ನು ನೀಡಿವೆ. ಆದರೆ, ನಾವು ಇಂದಿಗೂ ವಸಾಹತು ಕಾಲದ ಶಿಕ್ಷಣವೇ ಈಗಲೂ ಮುಂದುವರೆಸಿಕೊಂಡು ಬಂದಿದ್ದೇವೆ. ಇಂಗ್ಲಿಷ್ ಉದ್ಯೋಗದ ಭಾಷೆಯೆಂದು ಬಿಂಬಿಸಲಾಗಿದೆ. ಈ ಮನಸ್ಥಿತಿ ಬದಲಾಗಬೇಕು. ಪ್ರತಿ ಭಾಷೆಯೂ ಅಂತಾರಾಷ್ಟ್ರೀಯ ಭಾಷೆಯಾಗಿದೆ. ಎಲ್ಲ ಭಾಷೆಗಳಿಗೂ ದೊಡ್ಡ ಇತಿಹಾಸವಿದ್ದು, ಭಾಷೆ ಉಳಿಸಿದರೆ ಸಂಸ್ಕೃತಿಯನ್ನು ಉಳಿಸಿದಂತೆ ಆಗುತ್ತದೆ ಎಂದು ಹೇಳಿದರು.
ಪ್ರಸ್ತುತ ಆಂಗ್ಲಭಾಷೆಯನ್ನು ಜಾಗತಿಕ ಭಾಷೆ ಎಂದು ಪರಿಗಣಿಸಲಾಗುತ್ತಿದೆ. ಇಂಗ್ಲಿಷಿಗೂ ಮುನ್ನ ವಿಶ್ವದಲ್ಲಿ ಹಲವಾರು ಭಾಷೆಗಳು ಜಾಗತಿಕ ಭಾಷೆಯಾಗಿತ್ತು. ಆರಂಭದಲ್ಲಿ ಸೋಗ್ದಿಯನ್, ನಂತರ ಪರ್ಷಿಯನ್, ಪರ್ಸೋ ಅರೆಬಿಯಕ್, ಆ ನಂತರ ಫ್ರೆಂಚ್ ಜಾಗತಿಕ ಭಾಷೆಯಾಗಿತ್ತು. ಬ್ರಿಟಿಷರು ತಮ್ಮ ವಸಾಹತು ವಿಶ್ವದ ವಿವಿಧೆಡೆ ವಿಸ್ತರಿಸಿದ ನಂತರ ತಮ್ಮ ಆಡಳಿತಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಆಂಗ್ಲಭಾಷೆಯನ್ನು ಪರಿಚಯಿಸಿದರು ಎಂದು ತಿಳಿಸಿದರು.
ನಮ್ಮದು ಜ್ಞಾನ ಕೇಂದ್ರಿಕೃತ ದೇಶವಾಗಿದೆ. ನಮ್ಮ ಸಂಸ್ಕೃತಿ ಮೌಲ್ಯಗಳಿಂದ ತುಂಬಿಕೊಂಡಿದೆ. ಆದರೆ, ಆಂಗ್ಲಭಾಷೆಯ ಶಿಕ್ಷಣದಿಂದ ನಮ್ಮ ಜ್ಞಾನಪರಂಪರೆ, ಸಂಸ್ಕೃತಿ ನಾಶವಾಗುತ್ತಿದೆ. ಮಾತ್ರವಲ್ಲ, ಭಾರತೀಯರ ಆತ್ಮಗೌರವ ನಾಶವಾಗಿದೆ. ನಮಗೆ ಸಂಸ್ಕೃತ ಭಾಷೆಯ ಮೂಲಕ ಜ್ಞಾನಪರಂಪರೆ ಬಂದಿದೆ. ಸೋಗ್ದಿಯನ್, ಪರ್ಷಿಯನ್, ಫ್ರೆಂಚ್ ಸಾಮ್ರಾಜ್ಯ ಪಥನದ ನಂತರ ಆ ಭಾಷೆಗಳು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡಿತು. ಆದರೆ, ಸಂಸ್ಕೃತ ಭಾಷೆ ಇಂದಿಗೂ ತನ್ನ ಅಸ್ತಿತ್ವವನ್ನು ವಿಶ್ವದಲ್ಲಿ ಉಳಿಸಿಕೊಂಡಿದೆ. ಅದಕ್ಕೆ ಪ್ರಮುಖ ಕಾರಣ ಆ ಭಾಷೆಯಲ್ಲಿರುವ ಜ್ಞಾನ ಪರಂಪರೆ. ಸಂಸ್ಕೃತ ಭಾಷೆಯನ್ನು ಮೃತಭಾಷೆ ಅನ್ನುತ್ತಾರೆ. ಆದರೆ, ಸಂಸ್ಕೃತ ಕೇವಲ ಭಾಷೆಯಲ್ಲಿ ಅದು ನಮ್ಮ ಆಲೋಚನಾ ಕ್ರಮವಾಗಿದೆ. ನಮ್ಮ ಭಾಷೆಗಳೊಂದಿಗೆ ಸಂಸ್ಕೃತ ಮಿಳಿತಗೊಂಡಿದೆ. ಆಂಗ್ಲಭಾಷೆಯ ಶಿಕ್ಷಣದಿಂದ ದೇಶದ ವಿದ್ಯಾರ್ಥಿಗಳ ಚಿಂತನಾ ಕ್ರಮವೇ ಬದಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ ಮಾತನಾಡಿ, ದೇಶದ ಭಾಷಾ ವೈವಿಧ್ಯತೆಯೇ ದೇಶದ ಶಕ್ತಿಯಾಗಿದೆ. ಮಾತೃಭಾಷೆಯನ್ನು ಪ್ರೀತಿಸುವ ಜತೆಗೆ ಇತರ ಭಾಷೆಗಳನ್ನೂ ಗೌರವಿಸಬೇಕು. ಪೊಲೀಸ್ ಅಧಿಕಾರಿಗಳು ತನಿಖೆಗಾಗಿ ಇತರ ರಾಜ್ಯಗಳಿಗೆ ಹೋದಾಗ ಅಲ್ಲಿನ ಭಾಷಾ ತಿಳಿವಳಿಕೆ ಅನಿವಾರ್ಯವಾಗಿರುತ್ತದೆ. ಹೀಗಾಗಿ, ಅಕಾಡೆಮಿಯು ಭಾಷಾ ಸಂಸ್ಥಾನದ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ವೃತ್ತಿಪರ ಭಾಷಾ ಕಲಿಕೆಗೆ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಆಫ್ರಿಕಾದ ಸೂಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಡೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಪೊಲೀಸರು ಭಾರತೀಯ ಭಾಷೆಯಲ್ಲಿ ಮಾತನಾಡಿದರು. ಆಗ ಆದ ಸಂತೋಷ ಅಷ್ಟಿಷ್ಟಲ್ಲ. ಬೇರೆಡೆ ಕೆಲಸ ಮಾಡಲು ಹೋದಾಗ ಅಲ್ಲಿನ ಭಾಷೆಯಲ್ಲಿಯೇ ವ್ಯವಹರಿಸಿದರೆ ಮಾಹಿತಿ ಸುಲಭವಾಗಿ ಸಂಗ್ರಹಿಸಬಹುದು ಎಂದರು.
ಭಾರತದ ವಿವಿಧ ಭಾಷೆಗಳು, ಸಂಸ್ಕೃತಿ ವೈವಿಧ್ಯವೇ ಶಕ್ತಿಯಾಗಿದೆ. ರಾಜ್ಯದ ಗಡಿಭಾಗಗಳಲ್ಲಿನ ಇತರ ಭಾಷೆಗಳನ್ನು ಕಲಿಯಬೇಕು. ನಾನು ಚಾಮರಾಜನಗರದಲ್ಲಿ ಅಧಿಕಾರಿಯಾಗಿದ್ದಾಗ ತಮಿಳು, ಬೀದರ್‌ನಲ್ಲಿದ್ದಾಗ ಮರಾಠಿ, ತೆಲುಗು ಕಲಿತಿದ್ದೆ. ಹೆಚ್ಚು ಭಾಷೆಗಳನ್ನು ಕಲಿಯಬೇಕು. ಮಾತೃಭಾಷೆಯನ್ನು ಪ್ರೀತಿಸಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭ ಭಾಷಾ ಕಲಿಕೆ, ಭದ್ರತೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಿಐಐಎಲ್ ಹಾಗೂ ರಾಜ್ಯ ಪೊಲೀಸ್ ಅಕಾಡೆಮಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದವು. ಭಾಷಾ ವಿಜ್ಞಾನಿಗಳಾದ ದೆಹಲಿ ವಿಶ್ವವಿದ್ಯಾಲಯದ ಪ್ರೊ.ಆರ್.ಸಿ. ಶರ್ಮ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಎಲ್.ರಾಮಮೂರ್ತಿ, ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಮಾಜಿ ನಿರ್ದೇಶಕ ಪ್ರೊ.ರಾಜೇಶ್ ಸಚ್ದೇವ, ಉಪ ನಿರ್ದೇಶಕಿ ಉಮಾರಾಣಿ ಪಪ್ಪುಸ್ವಾಮಿ ಇದ್ದರು.