ಮದರ್ ತೆರೇಸಾ ಸೇವೆಯ ಮೂಲಕ ಪ್ರೀತಿಯ ಆಧ್ಯಾತ್ಮ ಕಂಡವರು 26ನೇ ಸಂಸ್ಮರಣಾ ದಿನಾಚರಣೆಯಲ್ಲಿ ಪ್ರೊ.ಕೆ.ಫಣಿರಾಜ್ ಅಭಿಮತ

mother theresa
Published on

ಮಂಗಳೂರು: ಮದರ್ ತೆರೇಸಾ ವಿದೇಶದಲ್ಲಿ ಹುಟ್ಟಿದರೂ ಭಾರತದಲ್ಲಿ ಸೇವೆಯ ಮೂಲಕ ಪ್ರೀತಿಯ ಆಧ್ಯಾತ್ಮವನ್ನು ಕಂಡವರು. ಅವರ ತ್ಯಾಗ, ಸೇವೆಯನ್ನು ಯುವ ಜನತೆಗೆ ತಿಳಿಸುವ ಕೆಲಸ ಆಗಬೇಕು ಎಂದು ಖ್ಯಾತ ಸಾಹಿತಿ, ವಿಮರ್ಶಕ ಪ್ರೊ.ಕೆ. ಫಣಿರಾಜ್ ಹೇಳಿದರು.


ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾ ಅವರ 26ನೆ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.


ಸುಮಾರು 3000 ವರ್ಷಗಳಿಂದ ಸಮಾಜದಲ್ಲಿ ಕಂಡು ಬಂದ ದ್ವೇಷ ಸಂಘರ್ಷಗಳ ಸಂದರ್ಭ ಬುದ್ಧ, ಯೇಸು, ಮುಹಮ್ಮದ್ ಪೈಗಂಬರರು ಪ್ರೀತಿಯ ಸೆಲೆಗಳಾಗಿ ಮಾನವೀಯತೆಯನ್ನು ಪ್ರಚಾರ ಪಡಿಸಿದ್ದರು. ಪ್ರತಿಯೊಂದು ಸಂಘರ್ಷದ ಕಾಲದಲ್ಲಿ ಹುಟ್ಟಿದ ಆಧ್ಮಾತ್ಮಿಕ ಚಿಂತನೆಗಳೂ ವೈವಿಧ್ಯತೆಯಿಂದ ಕೂಡಿದ್ದಾಗಿದೆ. ದೇಶದಲ್ಲಿ ಇಂದಿನ ದಿನಗಳಲ್ಲಿ ವಿಜೃಂಭಿಸುವ ದ್ವೇಷ ಸಂಘರ್ಷಕ್ಕೆ ಪ್ರತಿಯಾಗಿ ಮಾನವೀಯತೆಯ ಆಧ್ಮಾತ್ಮವನ್ನು ಹಂಚಬೇಕಾಗಿದೆ. ಇದಕ್ಕಾಗಿ ಪರಸ್ಪರ ಸ್ನೇಹವೆಂಬ ಮೈತ್ರಿ ಅಗತ್ಯವಾಗಿದೆ. ಮೈತ್ರಿಯನ್ನು ಭಾರತದ ಆಧ್ಯಾತ್ಮದಲ್ಲಿ ಕಟ್ಟಿಕೊಳ್ಳದಿದ್ದರೆ ನಮಗೆ ದೊರೆತ ಸ್ವಾತಂತ್ರೃಕ್ಕೆ ಅರ್ಥವೇ ಇರದು ಎಂದವರು ಹೇಳಿದರು.


‘ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ವಿಷಯ ಮಂಡನೆ ಮಾಡಿ ಮಾತನಾಡಿದ ಜನಪದ ವಿಧ್ವಾಂಸ ಡಾ.ಗಣನಾಥ ಶೆಟ್ಟಿ ಎಕ್ಕಾರು, ಹಲವು ವೈವಿಧ್ಯತೆಗಳನ್ನು ಪರಸ್ಪರ ಒಪ್ಪಿಕೊಂಡು ಬುದುಕುವುದೇ ಬಹುತ್ವ. ಅದುವೇ ಸಂವಿಧಾನದ ಮೂಲ ತತ್ವ. ಸಮಾಜದಲ್ಲಿನ ಭಿನ್ನತೆಗಳನ್ನು ಸ್ವೀಕರಿಸಿಕೊಂಡು ಧನಾತ್ಮಕ ಯೋಚನೆಯ ಮೂಲಕ ಪ್ರೀತಿಯ ಸೆಲೆಯನ್ನು ಹುಟ್ಟಿಸುವ ಕೆಲಸ ಆಗಬೇಕು. ಮದರ್ ತೆರೇಸಾ ಅವರ ಜೀವನ ಅರ್ಥ ಮಾಡಿಕೊಂಡರೆ ಪ್ರೀತಿಯ ಸೆಲೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.


ಮದರ್ ತೆರೇಸಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಾಜಿ ಮೇಯರ್ ಕೆ. ಅಶ್ರಫ್, ದಲಿತ ಮುಖಂಡ ದೇವದಾಸ್, ಮದರ್ ತೆರೇಸಾ ಸಂಸ್ಥೆಯ ಸಿ. ಶಾಂತಿಧನ್, ಸಿ.ರೋನಾ, ಧರ್ಮಗುರುಗಳಾ ಫಾ.ರೂಪೇಶ್ ಮಾಡ್ತ, ಫಾ.ಜಾನ್ ಡಿಸಿಲ್ವಾ, ಫಾ.ಜೆ.ಬಿ. ಸಲ್ಡಾನಾ, ಪ್ರಮುಖರಾದ ಮರ್ಲಿನ್ ರೇಗೊ, ಅನಿಲ್ ಲೋಬೊ, ಜೋಸೆಫ್ ಕ್ರಾಸ್ತಾ, ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಮಾಜಿ ಸಚಿವ ರಮಾನಾಥ ರೈ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಪದ್ಮರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಏಕತಾರಿ ಹಾಡುಗಾರ ನಾದ ಮಣಿನಾಲ್ಕೂರು ಹಾಗೂ ಜನಪ್ರೀತಿ ಬಳಗದಿಂದ ಪ್ರೀತಿಯ ಸಿಂಚನ ಸೌಹಾರ್ದ ಗಾಯನ ನಡೆಯಿತು.


ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಟಿ ಕಾರ್ಯದರ್ಶಿ ಮಂಜುಳಾ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net