ಶಕ್ತಿ ದೇವತೆಯಾಗಿ ನೆಲೆಸಿರುವ ಶ್ರೀದೇವಿರಮ್ಮ ತಾಯಿ

ಶಕ್ತಿ ದೇವತೆಯಾಗಿ ನೆಲೆಸಿರುವ ಶ್ರೀದೇವಿರಮ್ಮ ತಾಯಿ
Published on

ಬಿ.ಎಲ್.ಲಕ್ಷ್ಮಣ್ ಬೇಲೂರು

ಕಷ್ಟ ಎಂದು ಬೇಡಿ ಬಂದ ಭಕ್ತರನ್ನು ತನ್ನ ಶಕ್ತಿಯಿಂದ ಇಷ್ಟಾರ್ಥ ನೆರವೇರಿಸುತ್ತಲೇ ಕೂಡ್ಲೂರು ಗ್ರಾಮದ ಶ್ರೀದೇವಿರಮ್ಮ(ಕೂಡ್ಲೂರಮ್ಮ)ದೊಡ್ಡಮ್ಮ ನಾಡಿನ ಭಕ್ತರ ಆರಾಧ್ಯ ದೇವಿಯಾಗಿ, ಮನೆ ದೇವರಾಗಿ, ಶಕ್ತಿ ದೇವತೆಯಾಗಿ ನೆಲೆಸಿದ್ದಾಳೆ.

ತಾಲೂಕಿನ ಕಸಬಾ ಹೋಬಳಿ ಯಮಸಂಧಿ ಗ್ರಾಮ ಪಂಚಾಯಿತಿಯ ಕೂಡ್ಲೂರು ಗ್ರಾಮದಲ್ಲಿ ನೆಲೆಸಿರುವ ಗ್ರಾಮ ದೇವತೆಯೇ ಶ್ರೀದೇವಿರಮ್ಮ(ಕೂಡ್ಲೂರಮ್ಮ)ದೊಡ್ಡಮ್ಮ. ಈ ದೇವಸ್ಥಾನಕ್ಕೆ 900ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಪುರಾಣ ಕಥೆಗಳ ಪ್ರಕಾರ ಈ ದೇವಿಯನ್ನು ಸಪ್ತ ಋಷಿಗಳಲ್ಲಿ ಒಬ್ಬರಾದ ಅಗಸ್ತ್ಯ ಮಹರ್ಷಿ ಪೂಜಿಸಿದ್ದರೆಂಬ ಪ್ರತೀತಿ ಇದೆ. ಹಳೆಯ ದೇಗುಲವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ಹಿರಿಯರು.

ತಮ್ಮ ಸಮಸ್ಯೆಗಳಿಗಾಗಿ ಭಕ್ತರು ವಾದ್ಯದೊಂದಿಗೆ ದೇವಿರಮ್ಮ(ದೊಡ್ಡಮ್ಮ), ಚಿಕ್ಕಮ್ಮ ಹಾಗೂ ಭೂತಪ್ಪನ ಉತ್ಸವ ಮೂರ್ತಿಗಳನ್ನು ಹೊರಡಿಸಿ ಅಪ್ಪಣೆ, ಕುರುಹು ಕೇಳುವ ಪದ್ಧತಿ ರೂಢಿಯಲ್ಲಿದೆ. ಕುರುಹು ಕೇಳುವ ಸಂದರ್ಭ ಭಕ್ತರು ತಮ್ಮ ಮನಸ್ಸಿನಲ್ಲಿ ವ್ಯಕ್ತಿ ಅಥವಾ ವಸ್ತುಗಳನ್ನು ಮುಟ್ಟಬೇಕೆಂದು ಪ್ರಾರ್ಥಿಸಿದಂತೆಯೇ ದೇವರು ವ್ಯಕ್ತಿ ಅಥವಾ ವಸ್ತುಗಳನ್ನು ಮುಟ್ಟುವ ಮೂಲಕ ಇಂತಹ ಕೆಲಸ ಆಗುತ್ತದೆ ಅಥವಾ ಆಗುವುದಿಲ್ಲ ಎನ್ನುವುದನ್ನು ಕುರುಹುವಿನ ಪ್ರಕಾರ ತಿಳಿಸುತ್ತದೆ. ಭೂತ ಪಿಶಾಚಿ, ಅತಿಮಾನುಷ ಶಕ್ತಿಗಳಿಂದಲೂ ಬಿಡುಗಡೆ ಮಾಡುವ ಅದ್ಭುತವಾದ ಪವಾಡ ಈ ದೇವಿಯದ್ದಾಗಿದ್ದು, ಇಂದಿಗೂ ಹಲವಾರು ಆಸ್ಪತ್ರೆ, ದೇವಸ್ಥಾನ ಅಲೆದು ಅಂತಿಮವಾಗಿ ಇಲ್ಲಿಗೆ ಬಂದು ಸಮಸ್ಯೆ ಪರಿಹರಿಸಿಕೊಂಡ ನೂರಾರು ಉದಾಹರಣೆಗಳಿವೆ.

ನಾಗದೋಷಕ್ಕೂ ಇಲ್ಲಿನ ಹರಿಹರೇಶ್ವರ ದೇವಸ್ಥಾನದ ಎಡಬದಿಯಲ್ಲಿರುವ ನಾಗರಕಟ್ಟೆಯಲ್ಲಿ ಎಣ್ಣೆ ಮಜ್ಜನ ಮಾಡುವುದರಿಂದ ಪರಿಹಾರವಿದೆ. ವರ್ಷಕ್ಕೊಮ್ಮೆ ಹರಿಹರ-ಈಶ್ವರ ದೇವಸ್ಥಾನದಲ್ಲಿ ಕಾರ್ತಿಕ ವನ ಕಟ್ಟುವುದು ಅತ್ಯಂತ ಮೋಹಕವಾಗಿದೆ. ದೇವಿರಮ್ಮ ನಂಬಿದ ಭಕ್ತರ ಇಷ್ಟಾರ್ಥ ನೆರವೇರಿಸುತ್ತಲೇ ಎಲ್ಲರನ್ನೂ ರಕ್ಷಿಸುತ್ತ ನಾಡ ದೇವತೆಯಾಗಿದ್ದಾಳೆ. ಪ್ರತಿವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಕೂಡ್ಲೂರು ಗ್ರಾಮಕ್ಕೆ ಬೇಲೂರು-ಚಿಕ್ಕಮಗಳೂರಿನಿಂದ 18 ಕಿಲೋಮೀಟರ್ ಅಂತರ ಇದೆ. ದೇವಿರಮ್ಮ ದೇವಸ್ಥಾನ ಪ್ರಮುಖವಾಗಿ ಮೂರು ದೇವಸ್ಥಾನ ಹೊಂದಿದೆ. ದೇವಿರಮ್ಮನ ಎರಡು ವಿಗ್ರಹಗಳು, ಬಸವಣ್ಣನ ಮೇಲೆ ಗಣಪತಿಯೊಂದಿಗೆ ಕುಳಿತ ಪಾರ್ವತಿ ಪರಮೇಶ್ವರ ವಿಗ್ರಹ ಹೊಂದಿರುವ ಈ ಮಂದಿರದಲ್ಲಿ ಗರ್ಭಗುಡಿಯೊಂದಿಗೆ ವಿಶಾಲವಾದ ಪ್ರಾಂಗಣವಿದೆ. ದೇವಿರಮ್ಮನ ಸಹೋದರಿ ಚಿಕ್ಕಮ್ಮನ ದೇಗುಲ ದೇವಿರಮ್ಮನ ದೇವಾಲಯದಿಂದ ಬಲಕ್ಕೆ 100 ಅಡಿ ಅಂತರದಲ್ಲಿದ್ದರೆ, ಭೂತಪ್ಪನ ದೇಗುಲವು ದೇವಿರಮ್ಮ ದೇವಿಯ ಎಡಕ್ಕೆ 100 ಅಡಿಯಲ್ಲಿ ತ್ರಿಭುಜಾಕಾರದಲ್ಲಿದೆ. ಇನ್ನೊಂದು ಪ್ರಮುಖ ದೇಗುಲವಿದ್ದು, ಇಲ್ಲಿ ಗಣೇಶ-ಹರಿಹರೇಶ್ವರ, ಈಶ್ವರ-ಕಾಲಭೈರವೇಶ್ವರ ದೇವರುಗಳನ್ನೊಳಗೊಂಡಿರುವ ಏಕ ಗರ್ಭಗುಡಿಯಿದೆ. ಮುಂದೆ ಆಂಜನೇಯಸ್ವಾಮಿ ನೆಲೆ ನಿಂತಿದ್ದಾನೆ. ಇಲ್ಲಿ ಮಾದಿಗರ ಹರಳಯ್ಯ ದೇಗುಲ, ಅಡಗೂರು ತಮ್ಮಣ್ಣ ಎಂಬ ಪುಟ್ಟದೊಂದು ಗುಡಿ ಇದೆ.

ಈ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ಬೀರ ದೇವರ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತದೆ. ವಿಶೇಷ ದಿನಗಳನ್ನು ಹೊರತುಪಡಿಸಿದರೆ ಪ್ರತಿ ಶುಕ್ರವಾರ ಈ ದೇಗುಲಗಳಲ್ಲಿ ಪೂಜೆ ನಡೆಯುತ್ತದೆ. ಸಾವಿರಾರು ಜನ ಭಕ್ತರು ಹರಕೆಗಳನ್ನು ಒಪ್ಪಿಸುತ್ತಾರೆ. ಇಂತಹ ಕ್ಷೇತ್ರದಲ್ಲಿ ಎಲ್ಲ ಜಾತಿಯ ಜನರು ಅರ್ಚಕರಾಗಿ ಪೂಜಿಸುವುದು ವಿಶೇಷವಾಗಿದೆ. ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳ ಎರಡು ಅಥವಾ ಮೂರನೇ ಶನಿವಾರ ವಿಜೃಂಭಣೆಯಿಂದ ಕೂಡ್ಲೂರಮ್ಮ(ದೇವಿರಮ್ಮ) ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ನಾಡಿನಾದ್ಯಂತ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಇಲ್ಲಿನ ಜಾತ್ರಾ ಮಹೋತ್ಸವವು ಕೂಡ್ಲೂರು ಗ್ರಾಮಸ್ಥರ ನೇತೃತ್ವದಲ್ಲಿ ನಡೆಯುತ್ತದೆ. ಹತ್ತಾರು ಗ್ರಾಮಗಳ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ದೇಗುಲಕ್ಕೆ ತಾಲೂಕಿನ 150ಕ್ಕೂ ಹೆಚ್ಚು, ಚಿಕ್ಕಮಗಳೂರು ಜಿಲ್ಲೆಯ 300ಕ್ಕೂ ಹೆಚ್ಚು ಗ್ರಾಮಗಳ ಭಕ್ತರ ಮನೆ ದೇವರ ಒಕ್ಕಲುಗಳಿವೆ.

ಪವಾಡಕ್ಕೂ ಸಾಕ್ಷಿ: ಶ್ರೀದೇವಿರಮ್ಮ ಪವಾಡಕ್ಕೂ ಸಾಕ್ಷಿಯಾಗಿದ್ದಾರೆ. ಇಲ್ಲಿಗೆ ದಂಪತಿಗಳು ಆಗಮಿಸಿ ದೇವಿಗೆ ಹರಕೆ ಹೊತ್ತು ಮಕ್ಕಳ ಭಾಗ್ಯ ಪಡೆದಿರುವ ಉದಾಹರಣೆ ಇದೆ. ದೆವ್ವ ಪಿಶಾಚಿಗಳ ನಿರ್ಮೂಲನೆ ಮಾಡುವ ಶಕ್ತಿ ಕೇಂದ್ರವಾಗಿ ಪವಾಡ ನಡೆದಿವೆ. ಪ್ರಸ್ತುತ ದೇಗುಲ ನಿರ್ಮಿಸಿರುವ ಸ್ಥಳ ಹೊಸ ಕೂಡ್ಲೂರಿನ ಪ್ರದೇಶವಾಗಿದ್ದು, ಮೂರನೇ ಬಾರಿ ನಿರ್ಮಿತವಾಗಿದೆ. ಇದಕ್ಕೂ ಮೊದಲು ಎರಡು ಬಾರಿ ಈ ದೇಗುಲವನ್ನು ಅನ್ಯ ಕಾರಣಗಳಿಂದ ಮರುಪ್ರತಿಷ್ಠಾಪಿಸಲಾಗಿದೆ. ಪ್ರಥಮ ಬಾರಿಗೆ ಯಗಚಿ ಅಣೆಕಟ್ಟೆಯಿಂದ ಉತ್ತರಕ್ಕೆ ಅಂದರೆ ಹಳೇ ಕೂಡ್ಲೂರಿನ ಭಾಗದಲ್ಲಿ ಒಂದು ಕಿಲೋಮೀಟರ್ ದೂರದಲ್ಲಿ ಯಗಚಿ ನದಿಗಳ ಉಪ ನದಿಗಳು ಕೂಡುವ(ಸಂಗಮ)ಪ್ರದೇಶದಲ್ಲಿ ಈ ದೇವಾಲಯವಿತ್ತೆಂದು ಜಾತ್ರೆ ಉತ್ಸವಗಳಲ್ಲಿ ದೇವರಿಗೆ ಹಾಡುವ ಜಾನಪದ ಹಾಡುಗಳ ಮೂಲಕ ತಿಳಿಯುತ್ತದೆ. ಈ ದೇವಾಲಯ ನಿರ್ಮಿಸಿದ ವರ್ಷ ನಿಖರವಾಗಿ ತಿಳಿದಿಲ್ಲ. ಹಲವಾರು ಜಾನಪದ ಹಾಡುಗಳು, ಹಿರಿಯರ ಹೇಳಿಕೆ ಆಧಾರದಲ್ಲಿ ಹೊಯ್ಸಳ ಸಾಮ್ರಾಜ್ಯದ ಪ್ರಾರಂಭದಲ್ಲಿ ನಿರ್ಮಿಸಲಾಗಿತ್ತೆಂದು ಮತ್ತು ನದಿ ನೀರಿನ ಪ್ರವಾಹದ ಕಾರಣಕ್ಕಾಗಿ ಅಲ್ಲಿಂದ ಒಂದೂವರೆ ಕಿಲೋಮೀಟರ್ ಪೂರ್ವಕ್ಕೆ ದೇವಸ್ಥಾನವನ್ನ ಮರುನಿರ್ಮಾಣ ಮಾಡಲಾಯಿತೆಂದು ಇತಿಹಾಸ ಹೇಳುತ್ತದೆ.

ಮೊದಲನೇ ಪ್ರದೇಶದಲ್ಲಿ ಈ ದೇವಾಲಯ ಹೊಂದಿದ್ದ ಕಂಚಿನ ತೇರು ಮುಳುಗಿದೆ ಎಂದು ಹಿರಿಯರು ಮಾತನಾಡುತ್ತಾರೆ. ಅದು ಈ ದೇವಸ್ಥಾನದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂಬುದು ಪ್ರಚಲಿತದಲ್ಲಿದೆ. ಮೊದಲು ನಿರ್ಮಾಣವಾಗಿದ್ದ ದೇವಾಲಯದ ಪರಿಸರದ ಸುತ್ತಮುತ್ತಲೂ ಗದ್ದೆಗಳಿದ್ದು, ಅತ್ಯಂತ ಫಲವತ್ತಾದ ಭೂಮಿಯೊಂದಿಗೆ ನೀರಾವರಿ ವ್ಯವಸ್ಥೆ ಇತ್ತು. ಯಗಚಿ ಜಲಾಶಯ ನಿರ್ಮಾಣಕ್ಕೂ ಮೊದಲು ವ್ಯವಸಾಯ ಮಾಡುವಾಗ ಅಲ್ಲಿ ಮಣ್ಣಿನ ಮಡಕೆ, ಇಟ್ಟಿಗೆಗಳು, ಹಿಂದಿನ ಕಾಲದ ಗೃಹಪಯೋಗಿ ಮಣ್ಣಿನ ವಸ್ತುಗಳು ದೊರೆತ್ತಿದ್ದನ್ನು ಸ್ಥಳೀಯರು ಈಗಲೂ ನೆನೆಯುವುದರಿಂದ ಇಲ್ಲಿ ಹೊಯ್ಸಳರು ಆಳಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಒಂದು ಹಳಗನ್ನಡ ಶಾಸನವಿದೆ.

==

2006ರಲ್ಲಿ ಹೊಸದಾಗಿ ನಿರ್ಮಾಣ

ಎರಡನೇ ಬಾರಿ ಮರುಪ್ರತಿಷ್ಠಾಪನೆಯಾದ ದೇವಸ್ಥಾನದ ಪ್ರದೇಶದಲ್ಲಿ ಚಿಕ್ಕಮಗಳೂರು ಭಾಗದಿಂದ ಬರುವ ನದಿಗಳಿಂದ ಪ್ರವಾಹ ಉಂಟಾಗುತ್ತಿತ್ತು. ಪ್ರತಿವರ್ಷ ಭಾರಿ ವರ್ಷಧಾರೆಯಿಂದ ಜೂನ್-ಜುಲೈ ತಿಂಗಳಲ್ಲಿ ಮೂರ್ನಾಲ್ಕು ದಿನಗಳು ದೇವಾಲಯ ಮುಳುಗಡೆಯಾಗುತ್ತಿತ್ತು. ನಂತರ 1990ರಲ್ಲಿ ನಿರ್ಮಾಣಗೊಂಡ ಯಗಚಿ ಜಲಾಶಯಕ್ಕೆ ಸಾವಿರಾರು ಎಕರೆ ಭೂಮಿ ಜಲಾಶಯದ ಹಿನ್ನೀರಿನಲ್ಲಿ ದೇಗುಲ ಮತ್ತು ಜಮೀನಿನೊಂದಿಗೆ ಹಳೇಕೂಡ್ಲೂರು ಗ್ರಾಮ ಮುಳುಗಡೆಯಾದ್ದರಿಂದ ದೇವಸ್ಥಾನವನ್ನು ಹೊಸ ಕೂಡ್ಲೂರಿನ ಎತ್ತರದ ಪ್ರದೇಶದಲ್ಲಿ 2006ರಲ್ಲಿ ಹೊಸದಾಗಿ ನಿರ್ಮಿಸಲಾಯಿತು.

ಈ ಗ್ರಾಮವು ಮೂರು ಕಡೆ ನೀರಿನಿಂದ ಆವೃತವಾಗಿದ್ದು, ವಾಯುಮಾರ್ಗ, ಜಲಮಾರ್ಗ, ಭೂಮಾರ್ಗ ಹೊಂದಿರುವ ಹಾಸನ ಜಿಲ್ಲೆಯ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದು ಕಡೆ ಮಾತ್ರ ಭೂಮಿ ಬೆಸೆದುಕೊಂಡಿದ್ದು ಪರ್ಯಾಯ ದ್ವೀಪವಾಗಿರುವ ಕೂಡ್ಲೂರು ಗ್ರಾಮವಾಗಿದೆ. ಇಲ್ಲಿರುವ ಶ್ರೀದೇವಿರಮ್ಮ ಭಕ್ತರನ್ನು ಎಂದೂ ಕೈಬಿಟ್ಟಿರುವ ನಿದರ್ಶನವಿಲ್ಲ. ಆದ್ದರಿಂದಲೇ ಲಕ್ಷಾಂತರ ಭಕ್ತರ ಮನೆ ದೇವರಾಗಿ ಪೂಜಿಸುತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net