ಮನೆ ಕುಸಿದು ಮಣ್ಣಲ್ಲಿ ಸಿಲುಕಿದ ಮಕ್ಕಳನ್ನು ರಕ್ಷಿಸಿದ ತಾಯಿ

2210wdg03 copy
Published on

ಯಾದಗಿರಿ: ಕಳೆದೆರಡು ವಾರಗಳಿಂದ ಅಬ್ಬರಿಸಿದ ಮಳೆಯಿಂದಾಗಿ ವಡಿಗೇರಾ ಪಟ್ಟಣದಲ್ಲಿ ಮನೆ ಕುಸಿದಿದ್ದು ಮಣ್ಣಿನಲ್ಲಿ ಸಿಲುಕಿದ್ದ ಮೂರು ಮಕ್ಕಳನ್ನು ತಾಯಿ ಕಾಪಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ರಾತ್ರಿ ಊಟ ಮಾಡಿ ಮಲಗಿದ ಸಂದರ್ಭದಲ್ಲಿ ನೀರಿನಿಂದ ತೇವಗೊಂಡಿದ್ದ ಮಲ್ಲಪ್ಪ ಎಂಬುವವರ ಮನೆಗೋಡೆ ಕುಸಿದಿದೆ. ಇದರಿಂದ ಕಂಗಾಲಾದ ಗ್ರಹಿಣಿ ಚಂದ್ರಮ್ಮ ಮಣ್ಣಲ್ಲಿ ಸಿಕ್ಕಿಕೊಂಡ ಮಕ್ಕಳಾದ ಶಿವಮ್ಮ (8), ನಾಗಮ್ಮ (7) ಮತ್ತು ಪರಶುರಾಮ (10) ರಕ್ಷಿಸಿದ್ದಾಳೆ. ಅಲ್ಲಿ ಸಿಕ್ಕಿದ್ದ ಪತಿ ಮಲ್ಲಪ್ಪನ ರಕ್ಷಣೆಗೆ ಜೋರಾಗಿ ಕೂಗಿದ್ದಾಳೆ. ತಕ್ಷಣ ಅಕ್ಕಪಕ್ಕದ ಮನೆಯವರು ಬಂದು ಎಲ್ಲರನ್ನು ರಕ್ಷಿಸಿ, ಹೊರಗಡೆ ಕರೆ ತಂದಿದ್ದಾರೆ.

ಗಾಯಗೊಂಡ ಪತಿ ಮಲ್ಲಪ್ಪ ಮತ್ತು ಇಬ್ಬರು ಮಕ್ಕಳು ಸಧ್ಯ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೂ ಇಬ್ಬರು ಮಕ್ಕಳು ವಾಸಿಸಲು ಮನೆಯಿಲ್ಲದೆ ವಡಿಗೇರಾದ ಬೀದಿಯಲ್ಲಿ ಕಾಲ ದೂಡುವಂತಾಗಿದೆ. ಇದ್ದ ಒಂದು ಮನೆಯೂ ಈಗ ಇಲ್ಲದಂತಾಗಿದ್ದು, 4 ವರ್ಷದ ಮಗುವಿದೆ. ಸಧ್ಯ ನಾವು ಎಲ್ಲಿ ಜೀವನ ನಡೆಸಬೇಕು ಎಂಬುದು ತಿಳಿಯದಾಗಿದೆ ಎಂದು ಚಂದ್ರಮ್ಮ ಅಳಲು ತೋಡಿಕೊಂಡಿದ್ದಾಳೆ.

ತಾಲೂಕಾಡಳಿತ ಈ ಬಗ್ಗೆ ಗಮನ ಹರಿಸಿ ಮನೆ ಕಳೆದುಕೊಂಡ ಈ ಬಡ ಕುಟುಂಬಕ್ಕೆ ಕೂಡಲೇ ನೆರವಾಗಬೇಕು ಎಂದು ಪಟ್ಟಣದ ಜನತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net