ಬಾಗೇಪಲ್ಲಿ/ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಸಂಗಟಪಲ್ಲಿಯಲ್ಲಿ ಮಗಳನ್ನು ಕರೆದೊಯ್ದಿದ್ದಾನೆಂದು ಆಕ್ರೋಶಗೊಂಡ ಯುವತಿ ಕುಟುಂಬಸ್ಥರು ಪ್ರೇಮಿ ತಾಯಿಗೆ ಬೆಂಕಿ ಹಚ್ಚಿ, ಕೊಲೆಗೈಯ್ಯಲು ಯತ್ನಿಸಿದ್ದಾರೆ. ಅವಡದಲ್ಲಿ ಗ್ರಾಮದ ಬಯ್ಯಮ್ಮ (62) ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಗಟಪಲ್ಲಿಯ ಅಂಬರೀಶ ಹಾಗೂ ಸಿಂಗಪ್ಪಗಾರಿಪಲ್ಲಿಯ ಪ್ರತಿಭಾ ಪ್ರೀತಿಸಿದ್ದು, ಮದುವೆಗೆ ಯುವತಿಯ ಕುಟುಂಬಸ್ಥರ ವಿರೋಧ ಇತ್ತು. ಇದರ ನಡುವೆ ಪ್ರೇಮಿಗಳು ಪರಾರಿಯಾಗಿ, ಬಳಿಕ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ವಿಷಯ ತಿಳಿದ ಯುವತಿ ಮನೆಯವರು ಪ್ರೇಮಿಯ ಮನೆಗೆ ಹೋಗಿ ಗಲಾಟೆ ಮಾಡಿದ್ದು, ಕೋಪದಲ್ಲಿ ಪರಿಕರಗಳನ್ನು ಸುಡುವ ವೇಳೆ, ಬಯ್ಯಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾತಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.