6 ವರ್ಷದ ಪುತ್ರನನ್ನೇ ಕತ್ತು ಹಿಸುಕಿ ಕೊಂದಳು; ಆಕೆ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ಯಾಕೆ?

Manish Murder
Published on

ಬೆಂಗಳೂರು: ಎರಡು ತಿಂಗಳ ಮಗುವಿಗೆ ಹೊಡೆಯುತ್ತಿದ್ದ ಎಂಬ ಕಾರಣಕ್ಕೆ ಆರು ವರ್ಷದ ಪುತ್ರನ ಮೇಲೆ ಕುಪಿತಗೊಂಡ ತಾಯಿ, ಬಟ್ಟೆಯಿಂದ ಕತ್ತು ಹಿಸುಕಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಡೆದಿದೆ. ಪಟ್ಟಣಗೆರೆ ನಿವಾಸಿ ತೇಜ್‌ರಾಮ್ ಮತ್ತು ದೇವಿ ದಂಪತಿಯ ಪುತ್ರ ಮನೀಷ್ (6) ಕೊಲೆಯಾದ ಬಾಲಕ. ಈ ಕುರಿತು ಪತಿ ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಾಲಕನ ತಾಯಿ ದೇವಿ(26) ಎಂಬಾಕೆಯನ್ನು ಬಂಧಿಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಎಂ.ಪಾಟೀಲ್ ತಿಳಿಸಿದ್ದಾರೆ.

ರಾಜಸ್ಥಾನದ ಜೋದ್‌ಪುರ ಮೂಲದವರಾದ ತೇಜ್‌ರಾಮ್ ಕಳೆದ ಎಂಟು ವರ್ಷಗಳಿಂದ ಪಟ್ಟಣಗೆರೆಯಲ್ಲಿ ನೆಲೆಸಿದ್ದರು. ಇಲ್ಲಿನ ಮಾರಮ್ಮನ ದೇವಸ್ಥಾನದ ಬಳಿ ದಿನಸಿ ಅಂಗಡಿ ಹೊಂದಿದ್ದಾರೆ. ಆರು ವರ್ಷಗಳ ಹಿಂದೆ ತನ್ನ ಊರಿನವರಾದ ದೇವಿ ಎಂಬಾಕೆಯನ್ನು ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಪುತ್ರ ಮನೀಷ್ ಹಾಗೂ 2 ತಿಂಗಳ ಗಂಡು ಮಗುವಿದೆ. ಶನಿವಾರ ಧ್ಯಾಹ್ನ 12.45ರಲ್ಲಿ ಪತಿಗೆ ಕರೆ ಮಾಡಿದ್ದ ಪತ್ನಿ, ಪುತ್ರ ಮನೀಷ್ ಅಸ್ವಸ್ಥಗೊಂಡಿದ್ದು, ಕೂಡಲೇ ಮನೆಗೆ ಬರುವಂತೆ ಹೇಳಿದ್ದಳು. ತೇಜ್‌ರಾಮ್ ಮನೆಗೆ ಹೋದಾಗ ಮನೀಷ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ಈ ಬಗ್ಗೆ ತೇಜ್‌ರಾಮ್ ಪತ್ನಿಯನ್ನು ವಿಚಾರಿಸಿದ್ದರು. ಮನೀಷ್ ಮಲಗಿದ್ದ ಮಗುವಿಗೆ ಹೊಡೆಯುತ್ತಿದ್ದ. ಸುಮ್ಮನಿರುವಂತೆ ಎಷ್ಟು ಹೇಳಿದರೂ ಕೇಳಲಿಲ್ಲ. ಇದೇ ಕಾರಣಕ್ಕೆ  ಆತನಿಗೆ ಹೊಡೆದು, ದಿಂಬಿನಿಂದ ಮುಖ ಉಸಿರುಗಟ್ಟಿಸಿದ್ದೆ. ಬಳಿಕ ಬಟ್ಟೆಯಿಂದ ಕತ್ತು ಹಿಸುಕಿರುವುದಾಗಿ ಹೇಳಿದ್ದಳು. ತೇಜ್‌ರಾಮ್ ಕೂಡಲೇ ತನ್ನ ಸ್ನೇಹಿತನನ್ನು ಮನೆಗೆ ಕರೆಸಿಕೊಂಡು ಪ್ರಜ್ಞೆ ಕಳೆದುಕೊಂಡಿದ್ದ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು ಎಂದು ಡಿಸಿಪಿ ಸಂಜೀವ್ ಪಾಟೀಲ್ ವಿವರಿಸಿದರು.

ಮಾನಸಿಕ ಖಿನ್ನತೆ?: ಆರೋಪಿ ದೇವಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕೃತ್ಯ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಪುತ್ರ ಸಾವಿಗೀಡಾದ ವಿಚಾರ ಕೇಳಿ ತಮ್ಮ ಮುಂದೆ ಕಣ್ಣೀರಿಟ್ಟಿದ್ದಾಳೆ. ಆಕೆಗಿರುವ ಖಾಯಿಲೆಗೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net