

ಕೋಲಾರ: ನಗರದ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಕಳೆದ 2ದಿನ ಹಿಂದೆಯಷ್ಟೇ ಮೂರನೇ ವ್ಯಕ್ತಿ ಬಂದು ನವಜಾತ ಶಿಶುವನ್ನು ಚಿಕಿತ್ಸೆಗೆ ದಾಖಲು ಮಾಡಿ ಪರಾರಿಯಾಗಿರುವ ಪ್ರಕರಣ ಮಾಸುವ ಮುನ್ನವೇ, ತಾಯಿ ಒಬ್ಬರು ಗುರುವಾರ ರಾತ್ರಿ ಮಗುವಿಗೆ ಜನ್ಮ ನೀಡಿ ಶನಿವಾರ ಬೆಳಗಿನ ಜಾವ ಪರಾರಿಯಾಗಿದ್ದು, ಆಸ್ಪತ್ರೆಯಲ್ಲಿ ಭದ್ರತೆಯಿಲ್ಲದೆ ಇರುವುದು ಲೋಪಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರದ ಗರ್ಭಿಣಿ ಮಗುವಿಗೆ ಜನ್ಮ ನೀಡಿದವರು. ನಂತರ ಹೆರಿಗೆ ವಾರ್ಡ್ನಿಂದ ಮಕ್ಕಳ ತೀವ್ರ ನಿಗಾ ಟಕಕ್ಕೆ ಮಗುವನ್ನು ಸಾಗಿಸಲಾಗಿತ್ತು. ಜತೆಗೆ ತಾಯಿಯನ್ನು ವಾರ್ಡಿಗೆ ವರ್ಗಾಯಿಸಲಾಗಿತ್ತು. ಆದರೆ ತಾಯಿಯು ಶನಿವಾರ ಮಗುವನ್ನು ಬಿಟ್ಟು ಹೋಗಿದ್ದಾಳೆ.
ಮಗು ಸದ್ಯ ಆಸ್ಪತ್ರೆಯ ಆರೈಕೆಯಲ್ಲಿದ್ದು, ಹಾಲಿನ ಬ್ಯಾಂಕ್ನಿಂದ ಹಾಲುಣಿಸಲಾಗುತ್ತಿದೆ. ಯುವತಿಯು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ನೀಡಿದ್ದ ವಿಳಾಸ, ಮೊಬೈಲ್ ಸಂಖ್ಯೆ ನಕಲಿಯಾಗಿದೆ. ಹೆರಿಗೆ ಬಳಿಕ ಮಗುವನ್ನು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ತಾಯಿ ಮತ್ತೊಂದು ವಾರ್ಡ್ನಲ್ಲಿದ್ದರು. ಮಗು 1,500 ಗ್ರಾಂ ತೂಕವಿದೆ. ನಾಲ್ಕು ದಿನದ ಅಂತರದಲ್ಲಿ ಆಸ್ಪತ್ರೆಯಲ್ಲಿ ಶಿಶು ಬಿಟ್ಟು ಹೋಗಿರುವ ಎರಡನೇ ಪ್ರಕರಣ ಇದಾಗಿದ್ದು, ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಕ್ಕಳ ರಕ್ಷಣಾ ಟಕದ ಸುಪರ್ದಿಗೆ
ಮಗುವಿನ ತೂಕ ಗಮನಿಸಿದರೆ ಅವಧಿ ಪೂರ್ವ ಪ್ರಸವವಾಗಿರುವ ಸಾಧ್ಯತೆ ಇದೆ. ತಾಯಿ ಮಗುವನ್ನು ಬಿಟ್ಟು ಹೋಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ಒಪ್ಪಿಸಲಾಗುವುದು. ಇದೀಗ ಆಸ್ಪತ್ರೆಯಲ್ಲಿ ಇರಿಸಿಕೊಂಡು ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಕ್ಕಳ ತಜ್ಞ ಡಾ.ಕಮಲಾಕರ್ ತಿಳಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ
ಪಾಲಕರ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಮಗುವಿನ ತಾಯಿಯು ಏನೋ ಕೆಲಸಕ್ಕೆಂದು ಹೊರ ಹೋಗಿರಬಹುದು ಎಂದು ಸಿಬ್ಬಂದಿ ಭಾವಿಸಿದ್ದಿರಬಹುದು. ಈ ಪ್ರಕರಣದಲ್ಲಿ ತನಿಖೆ ನಡೆಸಿ ತಪ್ಪಿಸ್ಥರಿಗೆ ಕ್ರಮ ವಹಿಸುತ್ತೇವೆ ಎಂದು ಪ್ರಭಾರ ಜಿಲ್ಲಾ ಸರ್ಜನ್ ಡಾ.ಜಗದೀಶ್ ತಿಳಿಸಿದರು.