

ಮಡಿಕೇರಿ:
ವಿಶ್ವರಾಷ್ಟ್ರ ಸಂಸ್ಥೆಯ ಅಂತರ ರಾಷ್ಟ್ರೀಯ ಮಾತೃಭಾಷಾ ದಿನವಾದ ಬುಧವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು. ೨೦೨೪ರ ವಿಶ್ವ ಮಾತೃಭಾಷಾ ದಿನದಂದು ಯುನೆಸ್ಕೋ ಜಗತ್ತಿನಾದ್ಯಂತ ಮಾತೃಭಾಷೆಗಳಲ್ಲಿ ವೈವಿಧ್ಯ ಭಾಷೆಗಳ ಶಿಕ್ಷಣ ಕಲಿಕೆಗೆ ಆದ್ಯತೆ ಎಂಬ ಘೋಷವಾಕ್ಯವನ್ನು ಮೊಳಗಿಸಿದ್ದು, ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.
ಕೊಡವ ಭಾಷೆಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು. ಪ್ರತೀ ವರ್ಷ ಆಕ್ಸ್ಫರ್ಡ್ ಡಿಕ್ಷನರಿಯೂ ಜಗತ್ತಿನ ವಿವಿಧ ಭಾಷೆಗಳ ೧೫ ಸಾವಿರ ಹೊಸ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಆಕ್ಸ್ಫರ್ಡ್ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವುದರ ಮೂಲಕ ಕೊಡವ ಭಾಷೆ ಮತ್ತು ಆಕ್ಸ್ಫರ್ಡ್ ಡಿಕ್ಷನರಿ ಎರಡನ್ನು ಕೂಡ ಸಮೃದ್ಧ ಮತ್ತು ಶ್ರೀಮಂತಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಒಟ್ಟು ೨೭ ಹಕ್ಕೊತ್ತಾಯಗಳನ್ನ ಮಂಡಿಸಲಾಯಿತು.
ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕು, ಕೊಡವ ತಕ್ಕ್ ಮಾತೃಭಾಷೆ ಹೊಂದಿರುವ ಕೊಡಗಿನ ಆದಿಮ ಸಂಜಾತ ಕೊಡವ ಬುಡಕಟ್ಟು ಕುಲವನ್ನು ಪ್ರಿಮೇಟಿವ್ ಟ್ರೈಬ್ ಎಂದು ಪರಿಗಣಿಸಬೇಕು ಮತ್ತು ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು ಮತ್ತಿತರ ಬೇಡಿಕೆ ಮುಂದಿಡಲಾಯಿತು.
ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಕಾಂಡೇರ ಸುರೇಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಪುಟ್ಟಿಚಂಡ ದೇವಯ್ಯ, ಮಣವಟ್ಟಿರ ಚಿಣ್ಣಪ್ಪ ಮತ್ತಿತರರು ಇದ್ದರು.