23 ದಿನದ ಹಸುಗೂಸನ್ನೇ ಒಲೆಗೆ ಹಾಕಿ ಸುಟ್ಟ ತಾಯಿ: ಅಮಾನವೀಯ ಘಟನೆ ನಡೆದು ಹೋಯಿತು ಕಡೂರು ತಾಲೂಕು ಕೆರೆಸಂತೆಯಲ್ಲಿ..

chandrabai kaduru accused mother 26 MAR 20
Published on

ಕಡೂರು: ಜನ್ಮ ನೀಡಿದ ಮಾತೆಯೇ 21 ದಿನದ ಹೆಣ್ಣು ಮಗುವನ್ನು ಹತ್ಯೆ ಮಾಡಿ ನಂತರ ನೀರು ಕಾಯಿಸುವ ಒಲೆಯಲ್ಲಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ಕಡೂರು ತಾಲೂಕಿನ ದೊಡ್ಡಹಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಇಂತಹ ಹೀನ ಕೃತ್ಯ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ದೊಡ್ಡಹಟ್ಟಿ ಗ್ರಾಮದ ರಮೇಶನಾಯ್ಕ ಮತ್ತು ಚಂದ್ರೀಬಾಯಿ ಅವರ ಮಗಳು ಸಂಗೀತಾ (26) ಉತ್ತರ ಪ್ರದೇಶ ಮೂಲದ ಅಮಿತ್ ಎಂಬ ಯುವಕನ್ನು ಪ್ರೀತಿಸಿ 2 ವರ್ಷಗಳ ಹಿಂದೆ ಮದುವೆಯಾಗಿದ್ದು, ತವರು ಮನೆಯಲ್ಲೇ ನೆಲೆಸಿದ್ದರು. ಸಂಗೀತಾ ಮಾರ್ಚ್ 2 ರಂದು ಕಡೂರು ಸಾರ್ವಜನಿಕರ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಅವಳಿಗೆ ಹೆಣ್ಣು ಮಗು ಇಷ್ಟ ಇರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾ. 25ರಂದು ಮಗುವನ್ನು ಕೊಲೆ ಮಾಡಿ ನಂತರ ನೀರು ಕಾಯಿಸುವ ಒಲೆಯಲ್ಲಿ ಹಾಕಿ ಸುಟ್ಟಿದ್ದಾಳೆ.

ಈ ಕೃತ್ಯವನ್ನು ಮುಚ್ಚಿಹಾಕಲು, ಮಗು ಕಾಣಿಸುತ್ತಿಲ್ಲ, ನಾಯಿ ಕಚ್ಚಿಕೊಂಡು ಹೋಗಿದೆ ಎಂದು ಕೂಗಾಡಿದ್ದಾಳೆ. ತಂದೆ ರಮೇಶ್ ನಾಯ್ಕ ಮತ್ತು ಗ್ರಾಮಸ್ಥರು ಎಲ್ಲಾ ಕಡೆ ಹುಡುಕಿದಾಗ ಬಚ್ಚಲಕೋಣೆಯಿಂದ ಸುಟ್ಟ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪರಿಶೀಲನೆ ಮಾಡಿದಾಗ ನೀರಿನ ಒಲೆಯಲ್ಲಿ ಸುಟ್ಟು ಕರುಕಲಾಗಿದ್ದ ಮಗುವಿನ ದೇಹ ಸಿಕ್ಕಿದೆ.

ಸೇವಾನಗರದ ತಾಲೂಕು ಪಂಚಾಯಿತಿ ಸದಸ್ಯ ದೇವರಾಜನಾಯ್ಕ ನೀಡಿರುವ ದೂರು ಆಧರಿಸಿ ಕಡೂರು ಪೊಲೀಸರು ಸಂಗೀತಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿಡಲು ಆದೇಶ ಮಾಡಲಾಗಿದೆ.

ಮಗುವನ್ನು ಹತ್ಯೆ ಮಾಡಿರುವ ಸಂಗೀತಾ 2013 ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಒಂದು ತಿಂಗಳ ಹಿಂದೆ ವಿಚಾರಣೆಯಿಂದ ಖುಲಾಸೆಯಾಗಿದ್ದಳು ಎಂದು ಕಡೂರು ಪಿಎಸ್‌ಐ ವಿಶ್ವನಾಥ್ ತಿಳಿಸಿದ್ದಾರೆ.

ಸಂಗೀತಾ ತನ್ನ ಮಗುವನ್ನು ಸಾಯಿಸಿ ಯಾರಿಗೂ ತಿಳಿಯಬಾರದು ಎಂದು ನೀರು ಕಾಯಿಸುವ ಒಲೆಯಲ್ಲಿ ಹಾಕಿ ಸುಟ್ಟಿರುವ ವಿಚಾರವನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. | ವಿಶ್ವನಾಥ್, ಕಡೂರು ಪಿಎಸ್‌ಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net