ಅಕ್ರಮ ಸಂಬಂಧಕ್ಕೆ ಮುಗ್ಧ ಕಂದಮ್ಮನ್ನು ಕೊಂದ ತಾಯಿ

Crime Logo
Published on

ರಾಣೆಬೆನ್ನೂರ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆಂದು ನಾಲ್ಕು ವರ್ಷದ ಹೆತ್ತ ಮಗಳನ್ನೇ ತಾಯಿ ಮತ್ತು ಅಕ್ರಮ ಸಂಬಂಧ ಹೊಂದಿದ ವ್ಯಕ್ತಿ ಸೇರಿ ಹತ್ಯೆಗೈದಿರುವ ಘಟನೆ ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿದೆ ಬಂದಿದೆ.

ನಗರದ ಎಕೆಜಿ ಕಾಲನಿ ಗಂಗಮ್ಮ ಮಂಜುನಾಥ ಗುತ್ತಲ (37) ಹಾಗೂ ಗೌರಿಶಂಕರ ನಗರ ಅಣ್ಣಪ್ಪ ಹನುಮಂತಪ್ಪ ಮಡಿವಾಳರ (40) ಕೊಲೆ ಆರೋಪಿಗಳು. ಗಂಗಮ್ಮನ ಮೂರನೇ ಮಗಳಾದ ಪ್ರಿಯಾಂಕಾ (4) ಕೊಲೆಯಾದವಳು.

ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಎರಡು ತಿಂಗಳ ಹಿಂದೆ ಗಂಗಮ್ಮ ತನ್ನ ಪತಿ ಬಿಟ್ಟು ಮಗಳನ್ನು ಕರೆದುಕೊಂಡು ಅಣ್ಣಪ್ಪನ ಜೊತೆ ಹೋಗಿ ಗುಡ್ಡದ ಆನ್ವೇರಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ ಇಬ್ಬರ ನಡುವಿನ ಅಕ್ರಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಿದ್ದಾಳೆಂದು ಆಕೆಯ ಕೊಲೆಗೆ ಸಂಚು ರೂಪಿಸಿದ್ದರು.

ಆ. 5ರಂದು ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಹಾವೇರಿ ತಾಲೂಕಿನ ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಬಳಿ ಸುಟ್ಟು ಹಾಕಲು ಪ್ರಯತ್ನಿಸಿದ್ದರು. ಆದರೆ, ಬಾಲಕಿಯ ದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗುತ್ತಲ ಠಾಣೆ ಪೊಲೀಸರು ಬಾಲಕಿಯನ್ನು ಅಪರಿಚಿತ ಶವ ಎಂದು ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಪತಿ ಮಗಳನ್ನಾದರೂ ಕೊಡು ಎಂದಾಗ ಪ್ರಕರಣ ಬೆಳಕಿಗೆ...

ಗಂಗಮ್ಮಳ ಪತಿ ಮಂಜುನಾಥ "ನೀನು ಅವನ ಜತೆಗೆ ಜೀವನ ಮಾಡು, ಆದರೆ ನನ್ನ ಮಗಳನ್ನು ನನಗೆ ಕೊಟ್ಟು ಬಿಡು' ಎಂದು ಪಟ್ಟುಹಿಡಿದ್ದಿದ್ದ. ಆಗ ಗಂಗಮ್ಮ ಮಗಳು ಮೈಸೂರಿನಲ್ಲಿದ್ದಾಳೆ, ಆರಾಮ ಇಲ್ಲ, ಆಸ್ಪತ್ರೆಯಲ್ಲಿದ್ದಾಳೆ ಎಂದು ಕಥೆ ಕಟ್ಟುತ್ತ ಒಂದು ತಿಂಗಳ ಕಾಲ ದೂಡಿದ್ದಾಳೆ. ಇದರಿಂದಾಗಿ ಮಂಜುನಾಥ ಮಗಳನ್ನು ಕೊಡಿಸುವಂತೆ ಶಹರ ಠಾಣೆ ಪಿಎಸ್​ಐ ಗಡ್ಡಪ್ಪ ಗುಂಜುಟಗಿ ಮೊರೆ ಹೋಗಿದ್ದಾನೆ. ಪಿಎಸ್​ಐ ಗಂಗಮ್ಮ ಮತ್ತು ಅಣ್ಣಪ್ಪನನ್ನು ಕರೆತಂದು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಹೊಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಟೆಲ್​ನಲ್ಲಿ ಶುರುವಾಗಿದ್ದ ಅನೈತಿಕ ಸಂಬಂಧ...

ಗಂಗಮ್ಮ ನಗರದ ಹೋಟೆವೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಳು. ಅಣ್ಣಪ್ಪ ಕೂಡ ಅದೇ ಹೋಟೆಲ್​ನಲ್ಲಿ ಕೆಲಸ ಮಾಡಿಕೊಂಡಿದ್ದ. ಒಂದು ವರ್ಷದ ಹಿಂದೆ ಇಬ್ಬರ ನಡುವೆ ಅನೈತಿಕ ಸಂಬಂಧ ಶುರುವಾಗಿತ್ತು. ಗಂಗಮ್ಮ ದಂಪತಿಗೆ ಮೂವರು ಮಕ್ಕಳಿದ್ದರು. ಹಿರಿಯ ಎರಡು ಮಕ್ಕಳನ್ನು ಪತಿ ಕಡೆ ಬಿಟ್ಟು ಮೂರನೇ ಮಗಳಾದ ಪ್ರಿಯಾಂಕಾಳನ್ನು ಕರೆದುಕೊಂಡು ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಕಳೆದ ನಾಲ್ಕು ತಿಂಗಳ ಹಿಂದೆ ಗಂಗಮ್ಮ ಪತಿ ಬಿಟ್ಟು ನಾಪತ್ತೆಯಾಗಿದ್ದಳು. ಶಹರ ಠಾಣೆ ಪೊಲೀಸರು ಆಕೆಯನ್ನು ಪತ್ತೆ ಮಾಡಿಕೊಂಡು ಕುಟುಂಬದವರ ನಡುವೆ ಪಂಚಾಯಿತಿ ಸಹ ಮಾಡಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net