ಪ್ರತಿಯೊಬ್ಬರಿಗೂ ತಾಯಿ ಶ್ರೇಷ್ಠ ಶಿಕ್ಷಕಿ

19sunti03
Published on

ಸುಂಟಿಕೊಪ್ಪ: ಪ್ರತಿಯೊಬ್ಬರ ಬದುಕಿನಲ್ಲೂ ಒಳ್ಳೆಯತನವನ್ನು ಬೆಳೆಸಿ ಕೆಟ್ಟತನ ಅಳಿಸುವವರೇ ಗುರುಗಳು. ಅದರಲ್ಲೂ ತಾಯಿ ಅತ್ಯಂತ ಶ್ರೇಷ್ಠ ಶಿಕ್ಷಕಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಶುಕರೆ ಕಮಲ್ ಹೇಳಿದ್ದಾರೆ.

ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಗುರು- ಶಿಷ್ಯರ ಸಮ್ಮಿಲನ ಮತ್ತು ಸ್ನೇಹ ಸಂಗಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಂಟಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಅವರು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು. ಜತೆಗೆ ತಪ್ಪುಗಳನ್ನು ತಿದ್ದಿ ತೀಡಿದ ಶಿಕ್ಷಕರಿಗೆ ಕೃತಜ್ಞತೆ ಆರ್ಪಿಸಿದರು.

ಗುರು ಎಂಬ ಪದದ ಅರ್ಥ ಹೇಳಿದ ಅವರು, ಗು ಎಂದರೆ ಅಜ್ಞಾ, ರು ಎಂದರೆ ಜ್ಞಾನ. ನಮ್ಮಲ್ಲಿರುವ ಅಜ್ಞಾನ ಹೋಗಲಾಡಿಸಿ ಜ್ಞಾನವನ್ನು ನೀಡುವವರು ಗುರುಗಳು ಎಂದು ಬಣ್ಣಿಸಿದರು.

ಶಿಕ್ಷಣ ವ್ಯವಸ್ಥೆ ಬೆಳೆದು ಬಂದ ಕಾಲವನ್ನು ಪ್ರಾಚೀನ, ಮಧ್ಯಮ ಮತ್ತು ಆಧುನಿಕ ಕಾಲಗಳೆಂದು ವಿಶ್ಲೇಷಿಸಿದ ಅವರು, ಪ್ರಾಚೀನ ಕಾಲದಲ್ಲಿ ಮಠ, ಮಸೀದಿ ಮತ್ತು ಚರ್ಚ್‌ಗಳು ವಿದ್ಯಾ ದಾನದ ಕೇಂದ್ರಗಳಾಗಿತ್ತು. ಮಧ್ಯಮ ಕಾಲದಲ್ಲಿ ಸರ್ಕಾರಿ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಆರಂಭವಾದವು. ಈಗ ಆಧುನಿಕ ಕಾಲಘಟ್ಟದಲ್ಲಿ ನಾವು ಕ್ರಾಂತಿಕಾರಿ ಆಲೋಚನೆಗಳನ್ನು ಹೊಂದಿದ್ದೇವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಇನ್ನೂ ಶೌಚಗೃಹ, ಕುಡಿಯುವ ನೀರು, ವಿದ್ಯುತ್ ಸೌಕರ್ಯ ಮತ್ತು ಸಭಾಂಗಣಗಳು ಇಲ್ಲ ಎಂಬ ಕೂಗುಗಳು ಕೇಳಿ ಬರುತ್ತಲೇ ಇವೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾತನಾಡಿ, ನಾನು ಸುಂಟಿಕೊಪ್ಪ ಪುರಸಭೆ ಅಧ್ಯಕ್ಷನಾಗಿದ್ದ ವೇಳೆ ಪ್ರೌಢಶಾಲೆ ಮಂಜೂರು ಮಾಡಿಸಲು ಅಂದಿನ ಸಿಎಂ ಆರ್.ಗುಂಡೂರಾವ್ ಮತ್ತು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೆ. ಆದರೆ, ಶಾಲೆಯ ಕಟ್ಟಡ ಇಲ್ಲದ ಕಾರಣ ಶಾಲೆ ಮಂಜೂರು ಮಾಡಲು ವಿಳಂಬ ಮಾಡಿದರು. ಆಗ ನಾನೇ ಕಟ್ಟಡ ನಿರ್ಮಾಣದ ಜವಾಬ್ದಾರಿ ತಗೊಂಡು ದಾನಿಗಳಾದ ಡಿ.ವಿನೋದ್ ಶಿವಪ್ಪ ಮತ್ತು ಡಿ.ಆನಂದ್ ಬಸಪ್ಪ ಸಹಕಾರದಿಂದ 2 ತಿಂಗಳ ಅವಧಿಯಲ್ಲಿ 3 ಕೊಠಡಿ ಕಟ್ಟಿಸಿದ್ದೆ. ಅಧಿಕಾರ ಇದ್ದಾಗ ಒಳ್ಳೆಯ ಕೆಲಸ ಮಾಡಬೇಕೆಂದು ಕರೆ ನೀಡಿದ ಅವರು, ಇಂತಹ ಅತ್ಯುತ್ತಮ ಕಾರ್ಯಕ್ರಮವನ್ನು ಸಂಘಟಿಸಿದ ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು.

ನಿವೃತ್ತ ಶಿಕ್ಷಕ ಶಿವಪ್ಪ ಮಾತನಾಡಿ, ಪಿತೃಭಕ್ತಿ, ಗುರು ಭಕ್ತಿಯೊಂದಿಗೆ ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಆಗಲೇ ಜೀವನದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂಬುದಕ್ಕೆ ನ್ಯಾಯಮೂರ್ತಿ ಎಂ.ಜಿ.ಶುಕರೆ ಕಮಾಲ್ ಉದಾಹರಣೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿ ಸಿ.ಮಹೇಂದ್ರ ದಾನಿಗಳ ಪರಿಚಯ ಮಾಡಿದರು. ಕೆ.ಎಂ.ಇಬ್ರಾಹಿಂ ಮಾಸ್ಟರ್, ಡಿ.ಆನಂದ ಬಸಪ್ಪ, ಡಿ.ವಿನೋದ್ ಶಿವಪ್ಪ ಮತ್ತು ಪಟ್ಟೆಮನೆ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.

ಗುರು- ಶಿಷ್ಯರ ಅದ್ದೂರಿ ಮೆರವಣಿಗೆ:   ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಗುರು ಶಿಷ್ಯರ ಸಮ್ಮಿಲನ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ ಭಾನುವಾರ ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಧ್ವಜಾರೋಹಣ ಮತ್ತು ಅದ್ಧೂರಿ ಮೆರವಣಿಗೆಯೊಂದಿಗೆ ಚಾಲನೆ ದೊರೆಯಿತು.

ಮಳೆಯ ಸಿಂಚನದ ನಡುವೆ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿದೇರ್ಶಕ ವೈ ಶಿವರಾಮಯ್ಯ ಧ್ವಜಾರೋಹಣ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸುಂಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net