

ವಿಜಯಪುರ: ಪ್ರತಿಯೊಬ್ಬರ ಜೀವನದಲ್ಲಿ ಕೂಡಾ ತಾಯಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಾಳೆ. ತನ್ನ ಸಂತೋಷವೆಲ್ಲ ಮಗುವಿಗೆ ಧಾರೆ ಎರೆಯುತ್ತಾಳೆ. ಈ ಭೂಮಿಯ ಮೇಲೆ ತಾಯಿಗೆ ಸರಿ ಸಮಾನವಾದವರೂ ಮತ್ತೊಬ್ಬರಿಲ್ಲ. ತಾಯಿಯು ಸದಾ ಶ್ರೇಷ್ಠಳು ಎಂದು ಶ್ರೀ ಸಿದ್ಧೇಶ್ವರ ಕೋಚಿಂಗ್ ಕ್ಲಾಸೆಸ್ನ ಸಂಸ್ಥಾಪಕ ಸುರೇಶ ಜತ್ತಿ ಹೇಳಿದರು.
ನಗರದ ರೇಡಿಯೋ ಕೇಂದ್ರದ ಬಳಿಯ ಶಿವನೇರಿ ಬಿಜಿ ಶಾಲೆಯಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಮತ್ತು ಆರ್ಬಿಎ ನವೋದಯ ಕೋಚಿಂಗ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ "ಅಮ್ಮನಿಗೊಂದು ನಮನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ಜಗತ್ತಿನಲ್ಲಿಯೇ ಅಮ್ಮನ ಪ್ರೀತಿ, ತ್ಯಾಗ ಮತ್ತು ವಾತ್ಸಲ್ಯಕ್ಕೆ ಸರಿಸಾಟಿ ಇಲ್ಲ. ಅವಳ ನಿಷ್ಕಲ್ಮಶ ಪ್ರೀತಿಗೆ ನಾವು ಚಿರಋಣಿ. ತನ್ನ ಮಕ್ಕಳ ಮೇಲೆ ಅವಳಿಗಿರುವ ಪ್ರೀತಿಯು ಅನನ್ಯ ಮತ್ತು ಮುರಿಯಲಾಗದ ಬಂಧವಾಗಿದೆ ಎಂದು ಅವರು ಹೇಳಿದರು.
ಸಾಹಿತಿ ಆರ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ತಾಯಿ ಕಲಿಸಿದ ನೈತಿಕ ಮೌಲ್ಯಗಳು ಮಗುವಿನ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ವೃದ್ಧಾಪ್ಯದವರೆಗೂ ತಾಯಿ ಕಲಿಸಿದ ಮೌಲ್ಯಗಳು ಹಚ್ಚು ಹಸಿರಾಗಿ ನೆನಪಿನಲ್ಲಿ ಉಳಿಯುತ್ತವೆ. ಸಮಾಜದ ಭವಿಷ್ಯ ರೂಪಿಸುವಲ್ಲಿ ತಾಯಿಯ ಕೊಡುಗೆ ಮಹತ್ತರದ್ದಾಗಿದೆ ಎಂದು ತಿಳಿಸಿದರು.
ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ತಾಯಿಯ ಪ್ರೀತಿ ಶುದ್ಧ ಮತ್ತು ಮುಗ್ಧ. ಪ್ರೀತಿಸದ ತಾಯಿಯನ್ನು ಹುಡುಕುವುದು ಬಹುಶ: ಅಸಾಧ್ಯವಾದ ಕೆಲಸ ಎಂದರು.
ಅಧ್ಯಕ್ಷತೆ ವಹಿಸಿದ್ದ ರೇವಣಸಿದ್ದ ವಾಲೀಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಮ್ಮ ಹಳ್ಳಿ ಸ್ವಾಗತಿಸಿದರು. ಸಂಜನಾ ಸಿಂದಗಿ ನಿರೂಪಿಸಿದರು. ಓಂಕಾರ ವಂದಿಸಿದರು.
ಸಂತೋಷ ಹೆಗಡೆ, ಮಲ್ಲಿಕಾರ್ಜುನ ಮಿರ್ಗಿ, ಪಿ.ಬಿ. ಖೇಡಗಿ, ಅನ್ನಪೂರ್ಣ ಶಿರಗಟ್ಟಿ, ದೀಪಾ ಸುಲ್ತಾನಪೂರ, ಪರಶುರಾಮ ಅಪ್ಪನಗೋಳ ಮತ್ತಿತರರಿದ್ದರು.