ವರದಕ್ಷಿಣೆ ಕಿರುಕುಳಕ್ಕೆ ಬಾಣಂತಿ ಬಲಿ

NRD BANANTI DEATH
Published on

ನರಗುಂದ: ವರದಕ್ಷಿಣೆ, ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ಆರು ತಿಂಗಳ ಬಾಣಂತಿಯನ್ನು ಅತ್ತೆ-ಮಾವ ಸೇರಿ ನೇಣು ಬಿಗಿದು ಹತ್ಯೆಗೈದಿರುವ ಆರೋಪ ಪಟ್ಟಣದಲ್ಲಿ ಬುಧವಾರ ನಡೆದಿದ್ದು, ಬಾಣಂತಿಯ ಸಾವಿನಿಂದ 6 ತಿಂಗಳ ಹಸುಗೂಸು ಅನಾಥವಾಗಿದೆ.

ಪಟ್ಟಣದ ಸವದತ್ತಿ ರಸ್ತೆಗೆ ಹೊಂದಿಕೊಂಡಿರುವ ಹಗೇದಕಟ್ಟಿ ಓಣಿಯ ಪವಿತ್ರಾ ಹರೀಶ ಕಲಕುಟ್ಕರ (22) ಮಾನಸಿಕ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ದುರ್ದೈವಿ.

ಮೃತಳ ಅತ್ತೆ ಸೋಮವ್ವ ಕಲಕುಟ್ಕರ, ಮಾಜಿ ಸೈನಿಕ ಮಾವ ಮೂಕಪ್ಪ ಕಲಕುಟ್ಕರ ಹಾಗೂ 7 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪವಿತ್ರಾಳ ಪತಿ ಹರೀಶ ಮೂಕಪ್ಪ ಕಲಕುಟ್ಕರ್ ಎಂಬುವವರ ವಿರುದ್ಧ ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ?

ನರಗುಂದ ಹಗೇದಕಟ್ಟಿ ಓಣಿ ನಿವಾಸಿ ಹರೀಶ ಮೂಕಪ್ಪ ಕಲಕುಟ್ಕರ್ ಎಂಬಾತನಿಗೆ ಧಾರವಾಡದ ನಾಗಪ್ಪ ಕೊಟಬಾಗಿ ಎಂಬುವವರ ಮಗಳು ಪವಿತ್ರಾಳನ್ನು ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಒಂದು ತಿಂಗಳಲ್ಲಿ ಅತ್ತೆ, ಮಾವ ಮತ್ತು ಪತಿ ಅನುಮಾನ ವ್ಯಕ್ತಪಡಿಸುತ್ತಿದ್ದರು. 6 ತಿಂಗಳ ಹಿಂದೆ ಪತ್ನಿಗೆ ಹೆರಿಗೆಯಾಗಿದ್ದು, ಮಗನ ಮುಖ ನೋಡಲು ಹರೀಶ ಬಂದಿರಲಿಲ್ಲವಂತೆ. ಮಗನ ನಾಮಕರಣ ಸಂದರ್ಭದಲ್ಲಿ ಬಂಗಾರ ಹಾಕಿಲ್ಲವೆಂದು ಅತ್ತೆ, ಮಾವ ಮನೆಯಲ್ಲಿ ಕಿರುಕುಳ ನೀಡಿದರೆ, ಪತಿ ಕರ್ತವ್ಯದಲ್ಲಿದ್ದುಕೊಂಡೇ ಫೋನ್​ನಲ್ಲಿ ನಿತ್ಯ ಜಗಳವಾಡುತ್ತಿದ್ದ. ರಜೆಗೆಂದು ಬಂದಾಗ ನಿತ್ಯ ಕುಡಿದು ಬಂದು ಹಿಂಸಿಸುತ್ತಿದ್ದ. ನಿನ್ನ ಹೊಟ್ಟೆಯಲ್ಲಿ ಜನಿಸಿದ ಮಗು ತನ್ನದಲ್ಲ ಎಂದು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ. ಈ ಮೂವರು ನಿತ್ಯ ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ನಮ್ಮ ಮಗಳ ಕತ್ತು ಹಿಸುಕಿ ಸಾಯಿಸಿ ಬಳಿಕ ಸೀರೆಯಿಂದ ನೇಣು ಹಾಕಿದ್ದಾರೆ. ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತ ಪವಿತ್ರಾಳ ಪಾಲಕರು ಎಸ್ಪಿ ಬಿ.ಎಸ್. ನೇಮಗೌಡ ಅವರನ್ನು ಒತ್ತಾಯಿಸಿದ್ದಾರೆ.

ನರಗುಂದದಲ್ಲಿ ಪವಿತ್ರಾ ಕಲಕುಟ್ಕರ್ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿ ನೇಣು ಬಿಗಿದು ಹತ್ಯೆಗೈದಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಕೆಯ ಅತ್ತೆ, ಮಾವ, ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ, ಮರಣೋತ್ತರ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಬಿ.ಎಸ್.ನೇಮಗೌಡ ಎಸ್ಪಿ, ಗದಗ

ನ್ಯಾಯ ಕೊಡಿಸಿ

ಅರಗಿಣಿಯಂತೆ ಸಾಕಿದ್ದ ಮಗಳನ್ನು ದುರುಳರು ಕತ್ತು ಹಿಸುಕಿ ಕೊಂದಿದ್ದಾರೆ. ನರಗುಂದದಲ್ಲಿದ್ದಾಗ ನಮ್ಮ ಮಗಳಿಗೆ ಗಂಡನ ಪ್ರೀತಿ, ಶಾಂತಿ, ನೆಮ್ಮದಿ ಯಾವ್ದೂ ಸಿಗಲಿಲ್ಲ. ಹೀಗಾಗಿ ಆಕೆಯ ಶವವನ್ನು ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸಾರ ನೆರವೇರಿಸುತ್ತೇವೆ ಎಂದು ಪಾಲಕರು ಗೋಳಾಡಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net