ಸಾವಿನಲ್ಲಿ ಒಂದಾದ ಅತ್ತೆ, ಸೊಸೆ!

unnamed
Published on

ನಾಗಮಂಗಲ: ತಾಲೂಕಿನ ಕಾಡ ಅಂಕನಹಳ್ಳಿ ಗ್ರಾಮದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೊಸೆ ಸಾವನ್ನಪ್ಪಿದ್ದನ್ನು ನೋಡಿ ಅತ್ತೆಯೂ ಸಹ ಕುಸಿದು ಬಿದ್ದು, ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗುರುವಾರ ಮೃತಪಟ್ಟಿದ್ದಾರೆ.
ಗ್ರಾಮದ ಸುಶೀಲಮ್ಮ(46) ಮತ್ತು ಹುಚ್ಚಮ್ಮ(80) ಎಂಬುವರೇ ಒಂದೇ ದಿನ ಸಾವನ್ನಪ್ಪಿರುವ ಅತ್ತೆ ಸೊಸೆಯಾಗಿದ್ದಾರೆ. ಕೆಲ ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಸುಶೀಲಮ್ಮ ಅವರಿಗೆ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ರೋಗಿಯ ಸಂಬಂಧಿಕರು ವೈದ್ಯರನ್ನು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಸುಶೀಲಮ್ಮ ಅವರನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಮನೆಗೆ ಕರೆದುಕೊಂಡು ಹೋಗುವ ವೇಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸುಶೀಲಮ್ಮ ಸಾವನ್ನಪ್ಪಿದ್ದಾರೆ. ತನ್ನ ಸೊಸೆ ಸಾವನ್ನಪ್ಪಿದ್ದ ವಿಷಯ ತಿಳಿದು ಮೃತ ದೇಹ ನೋಡಲು ಹೋಗಿದ್ದ ಅತ್ತೆ ಹುಚ್ಚಮ್ಮ ಇದ್ದಕ್ಕಿದ್ದಂತೆ ಕುಸಿದು ಬಿದ್ದು ತೀವ್ರ ಅಸ್ವಸ್ತರಾದರು.

ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮಾರ್ಗಮಧ್ಯೆ ಅವರೂ ಮೃತಪಟ್ಟಿದ್ದರು. ಗುರುವಾರ ಸಂಜೆ ಅತ್ತೆ ಮತ್ತು ಸೊಸೆಯ ಮೃತದೇಹಗಳನ್ನು ಸ್ವಗ್ರಾಮ ತಾಲೂಕಿನ ಕಾಡಅಂಕನಹಳ್ಳಿ ಗ್ರಾಮಕ್ಕೆ ತಂದು ಶುಕ್ರವಾರ ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿ ಎರಡೂ ಮೃತದೇಹಗಳನ್ನು ಒಟ್ಟಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net