

ಚಿತ್ರದುರ್ಗ: ಅತ್ತೆ-ಸೊಸೆ ಸಂಬಂಧ ತಾಯಿ-ಮಗಳಿನಂತೆ. ಹೀಗಾಗಿ ಇಬ್ಬರ ನಡುವೆ ಪ್ರೀತಿ-ಮಮಕಾರ ಹೆಚ್ಚಾದಾಗ ಬದುಕು ಸುಂದರವಾಗಲಿದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.
ಮುರುಘಾಮಠದಲ್ಲಿ ಮಂಗಳವಾರ ಆಯೋಜಿಸಿದ್ದ 33ನೇ ವರ್ಷದ 9ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ, ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ಮನುಷ್ಯ ಸದಾ ಸಮಾಜಕ್ಕೆ ಋಣಿಯಾಗಿರಬೇಕು. ತಂದೆ-ತಾಯಿ, ಗುರು-ಹಿರಿಯರೇ ಅತ್ಯಂತ ಶ್ರೇಷ್ಠ ವ್ಯಕ್ತಿಗಳಾಗಿದ್ದು, ಅವರನ್ನು ಗೌರವಿಸಬೇಕು ಎಂದರು.
ಶ್ರೀ ಗಜದಂಡ ಸ್ವಾಮೀಜಿ ಮಾತನಾಡಿ, ವ್ಯಕ್ತಿಯ ಜೀವನದಲ್ಲಿ ಕುಟುಂಬ ದೊಡ್ಡ ರಥವಿದ್ದಂತೆ. ಅದನ್ನು ಸಮಾನವಾಗಿ ಎಳೆದುಕೊಂಡು ಹೋಗಬೇಕು ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ, ಸಾಲ ಮಾಡಿ ಮದುವೆಗಳನ್ನು ಮಾಡುವ ಕಾಲದಲ್ಲಿ ಶ್ರೀಮಠವು ಸರಳ ವಿವಾಹಗಳಿಗೆ ಆದ್ಯತೆ ನೀಡಿರುವುದು ಆದರ್ಶಪ್ರಾಯವಾಗಿದೆ. ನವ ವಧು-ವರರು ಉತ್ತಮ ಬಾಂಧವ್ಯದೊಂದಿಗೆ ದಾಂಪತ್ಯ ನಡೆಸಿದಾಗ ಜೀವನ ಸುಖಕರವಾಗಲಿದೆ ಎಂದರು.
6 ಜೋಡಿ ವಿವಾಹ ನೆರವೇರಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಡಾ.ಶಶಿಕುಮಾರ್ ವಿ.ಮೆಹರವಾಡ, ಪೈಲ್ವಾನ್ ತಿಪ್ಪೇಸ್ವಾಮಿ, ವೀರಭದ್ರಪ್ಪ, ಟಿ.ಪಿ.ಜ್ಞಾನಮೂರ್ತಿ ಇತರರಿದ್ದರು.