ಐದು ಮಕ್ಕಳಿದ್ದರೂ ವೃದ್ಧ ತಾಯಿಗೆ ದಿಕ್ಕಿಲ್ಲ

monthin disilva new
Published on

ಉಡುಪಿ: ನಾಲ್ವರು ಪುತ್ರಿಯರು, ಓರ್ವ ಪುತ್ರ, ಪತಿಯ ಸ್ವಯಾರ್ಜಿತ ಎಕರೆಗಟ್ಟಲೆ ಆಸ್ತಿ ಇದ್ದರೂ ವೃದ್ಧೆಗೆ ಹೊತ್ತಿನ ಊಟಕ್ಕೂ ತತ್ವಾರ. ಮಕ್ಕಳಿಂದಲೇ ವಂಚನೆಗೊಳಗಾಗಿರುವ ಮೂಡುಬಿದಿರೆ ಸಮೀಪದ ಕಲ್ಲಮುಂಡ್ಕೂರು ಗ್ರಾಮದ ಮೋಂತಿನ್ ಡಿಸಿಲ್ವ(85) ಅವರಿಗೆ ನ್ಯಾಯ ಸಿಗುವ ತನಕ ಕಾನೂನು ಹೋರಾಟದಲ್ಲಿ ನೆರವು ನೀಡುವುದಾಗಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಬಾಗ್ ತಿಳಿಸಿದ್ದಾರೆ.

ಮೋಂತಿನ್ ಡಿಸಿಲ್ವ ಅವರ ಪತಿ ಬ್ಯಾಪ್ಟಿಸ್ಟ್ ಡಿಸಿಲ್ವ 2006ರಲ್ಲಿ ನಿಧನರಾಗಿದ್ದರು. ಅವರ ಹೆಸರಿನಲ್ಲಿ 6.25 ಎಕರೆ ಜಮೀನು ಹಾಗೂ ಮನೆ ಇತ್ತು. ಮಕ್ಕಳು ನಿತ್ಯ ಒತ್ತಾಯಿಸುತ್ತಿದ್ದುದರಿಂದ ಆಸ್ತಿ ಪಾಲು ಮಾಡಲು ಮೋಂತಿನ್ ಒಪ್ಪಿದ್ದರು. ಆದರೆ, ತಮ್ಮ ಪಾಲಿನ ಆಸ್ತಿ ಮಾತ್ರವಲ್ಲದೆ ಅನಕ್ಷರಸ್ಥೆ ತಾಯಿಯ ಗಮನಕ್ಕೆ ಬಾರದೆ ಅವರ ಪಾಲಿನ ಜಮೀನನ್ನೂ ಮಕ್ಕಳು ಅವರ ಜಂಟಿ ಹೆಸರಿಗೆ ವರ್ಗಾಯಿಸಿ ಅನ್ಯಾಯ ಮಾಡಿದ್ದಾರೆ. ತಾಯಿಯ ಪಾಲಿಗೆ ಬಂದ 2.25 ಎಕ್ರೆ ಜಮೀನು ವಿಂಗಡಿಸಿಟ್ಟರೂ, ಆ ಜಮೀನನ್ನು ಎಲ್ಲ ಮಕ್ಕಳೂ ಜಂಟಿಯಾಗಿ ಹಕ್ಕುದಾರರು ಎಂದು ವಿಭಾಗ ಪತ್ರದಲ್ಲಿ ದಾಖಲಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಊಟ, ಔಷಧಕ್ಕೆ, ಖರ್ಚಿಗೆ ಹಣ ಇಲ್ಲದಾಗ, ತನ್ನ ಪಾಲಿಗೆ ವಿಂಗಡಿಸಿದ್ದ ಆಸ್ತಿಯನ್ನು ಈ ಕೂಡಲೇ ಹಿಂದಿರುಗಿಸಬೇಕೆಂದು ಮಂಗಳೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ 2018ರಲ್ಲಿ ಮೋಂತಿನ್ ದೂರು ಸಲ್ಲಿಸಿದರು. ತನಿಖೆ ನಡೆಸಿದ ಮಂಡಳಿ ಎಲ್ಲ ಐದು ಮಕ್ಕಳು ತಲಾ 2 ಸಾವಿರ ರೂ. ಮಾಸಾಶನ ನೀಡುವಂತೆ 2019ರಲ್ಲಿ ಆದೇಶಿಸಿತ್ತು. ಆದರೆ ಯಾವ ಮಕ್ಕಳೂ ನಿಯಮಿತವಾಗಿ ಮಾಸಾಶನ ನೀಡಿಲ್ಲ. ತಾಯಿಯ ಪೋಷಣೆಗೆ ಹಣ ಕೊಡುವುದು ಅಸಾಧ್ಯ ಎಂದು ಲಿಖಿತವಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.

ಅನಾರೋಗ್ಯದ ನಡುವೆಯೂ ಮೋಂತಿನ್ ಡಿಸಿಲ್ವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಒಂಟಿ ಜೀವನ: ಅನಾರೋಗ್ಯದ ನಡುವೆ ವೃದ್ಧೆ ಮನೆಯಲ್ಲಿ ಒಂಟಿಯಾಗಿ ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಎರಡು ವರ್ಷಗಳಿಂದ ಮಕ್ಕಳು ತಾಯಿಯನ್ನು ನೋಡಿಕೊಳ್ಳುತ್ತಿಲ್ಲ. ನಿತ್ಯದ ಖರ್ಚಿಗೂ ಇತರರ ಮುಂದೆ ಕೈಚಾಚುವ ಪರಿಸ್ಥಿತಿ ಇದೆ. ಹಿರಿಯ ನಾಗರಿಕರ ನ್ಯಾಯ ಮಂಡಳಿ ಆದೇಶಕ್ಕೆ ಬೆಲೆ ಇಲ್ಲ. ಈಗ ವೃದ್ಧೆ ತನಗೆ ನ್ಯಾಯ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮೇಲ್ಮನವಿ ನೀಡಲು ಪ್ರತಿಷ್ಠಾನ ವತಿಯಿಂದ ಕಾನೂನು ನೆರವು ನೀಡಲಾಗಿದೆ. ನ್ಯಾಯ ಸಿಗುವ ತನಕ ಸಹಕಾರ ನೀಡಲು ಪ್ರತಿಷ್ಠಾನ ಬದ್ಧವಾಗಿದೆ ಎಂದು ಡಾ.ಶಾನುಭಾಗ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net