ಭೂಮಿ ತಾಯಿ ಹೋರಾಟ ಸಮಿತಿ ಪ್ರತಿಭಟನೆ

04-01--krs1 (2)
Published on

ಕೆ.ಆರ್.ಸಾಗರ: ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಹೆಚ್ಚಿಸಲು ನಾಲೆಗಳಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.


ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಇಇ ಕಚೇರಿ ಮುಂಭಾಗದಲ್ಲಿ ಸಮಿತಿ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಜಮಾಯಿಸಿದ ನೂರಾರು ರೈತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಕೆ.ಆರ್.ಸಾಗರ ಅಣೆಕಟ್ಟೆಯಲ್ಲಿ ನೀರಿನ ಶೇಖರಣೆ ಕಡಿಮೆ ಇದ್ದು, ಇರುವ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡಲು 2023ರ ಡಿಸೆಂಬರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಾಲೆಗಳಿಗೆ ನೀರು ನಿಲ್ಲಿಸಿ ತಿಂಗಳು ಕಳೆದಿದೆ. ಮತ್ತೆ ನಾಲೆಗಳಲ್ಲಿ ನೀರು ಹರಿಸಲು ದಿನಾಂಕ ತಿಳಿಸಿಲ್ಲ. ನಾಲಾ ವ್ಯಾಪ್ತ್ತಿಯ ಗ್ರಾಮಗಳಲ್ಲಿನ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಹೆಚ್ಚಿಸಲು ನೀರಿನ ಅಗತ್ಯ ಇರುವ ಕಾರಣ ಶೀಘ್ರವಾಗಿ ಕೆ.ಆರ್.ಎಸ್. ಅಣೆಕಟ್ಟೆಯಿಂದ ನಾಲೆಗಳಲ್ಲಿ ಕೆಲ ದಿನಗಳ ಕಾಲ ನೀರು ಹರಿಸಬೇಕು ಎಂದು ಆಗ್ರಹಿಸಿದರು.


ಸ್ಥಳಕ್ಕೆ ಎಇಇ ಫಾರೂಕ್ ಅಭು ಮತ್ತು ಕಿಶೋರ್ ಕುಮಾರ್ ಧಾವಿಸಿ ರೈತ ಮುಖಂಡರ ಅಹವಾಲು ಆಲಿಸಿದರು. ನಾಲೆಗಳಿಗೆ ನೀರು ಹರಿಸುವ ಕುರಿತು ಸಚಿವರೊಂದಿಗೆ ಚರ್ಚಿಸಿ ಹಿರಿಯ ಅಧಿಕಾರಿಗಳು ಶೀಘ್ರವೇ ದಿನಾಂಕ ತೀರ್ಮಾನಿಸುತ್ತಾರೆ. ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ತೀರ್ಮಾನ ಪಾಲಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಸಮಿತಿಯ ಮಂಜುನಾಥ್, ರವಿ, ಲಕ್ಷ್ಮಣ, ಚಾಮರಾಜು, ಮಹದೇವ, ಸಿದ್ದೇಗೌಡ, ಶಿವಣ್ಣ, ವಸಂತಕುಮಾರ್, ಬೆಳಗೊಳವಿಷಕಂಠ, ಕೆಂಪೆಗೌಡ, ರಾಮಚಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net