ಜೀವ ಸಂಕುಲಗಳ ತಾಯಿ ಭೂಮಿ

FotoJet (2)
Published on

3 ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ಅಭಿಮತ

 ಕೆಜಿಎಫ್​ : ಇಂದು ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದ್ದು, ಅದೆಷ್ಟೋ ಜೀವ ಸಂಕುಲಗಳು ಅಳಿವಿನಂಚಿನಲ್ಲಿವೆ. ಈ ನಿಟ್ಟಿನಲ್ಲಿ ಪರಿಸರ ಮತ್ತು ಭೂಮಿಯನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.

ನಗರದ ಕೆಂಗಲ್​ ಹನುಮಂತಯ್ಯ ಕಾನೂನು ವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ

ವಿಶ್ವ ಭೂದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನ ಸ್ವಾರ್ಥಕ್ಕೆ ಭೂಮಿ ತಾಯಿಯ ಮಡಿಲು ನಶಿಸಿ ಹೋಗುತ್ತಿದೆ. ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆೆ, ಭೂಮಿ ತಾಯಿ ಮನುಷ್ಯನನ್ನು ಮಾತ್ರವಲ್ಲದೆ ಸಸ್ಯ ಮತ್ತು ಪ್ರಾಣಿ ಸಂಕುಲ ಸೇರಿದಂತೆ ಅದೆಷ್ಟೋ ಜೀವ ಸಂಕುಲಗಳನ್ನು ತನ್ನ ಒಡಲಿನಲ್ಲಿಟ್ಟು ಸಾಕಿ ಸಲಹುತ್ತಿದ್ದಾಳೆ ಎಂದು ಹೇಳಿದರು.

ಹಿರಿಯ ನ್ಯಾಯಾಧೀಶ ಮುಜಫರ್​ ಎ ಮಾಂಜರಿ ಮಾತನಾಡಿ, ಭೂತಾಯಿ ಮನುಷ್ಯರು, ಪ್ರಾಣಿ-&ಪಕ್ಷಿಗಳು, ಮರ ಗಿಡಗಳು ಸೇರಿ ಜಗತ್ತಿನ ಕೋಟ್ಯಂತರ ಜೀವ ಸಂಕುಲಗಳಿಗೂ ಆಶ್ರಯದಾತೆ. ಆದರೆ ಇಂದು ಮನುಷ್ಯನ ಸ್ವಾರ್ಥಕ್ಕೆ ಭೂಮಿ ತನ್ನ ಸಮತೋಲನ, ಅಸ್ತಿತ್ವವನ್ನು ಕಳೆದುಕೊಂಡು ವಿನಾಶದತ್ತ ಹೆಜ್ಜೆ ಹಾಕುತ್ತಿದೆ ಎಂದರು.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ, ಜಾಗತಿಕ ತಾಪಮಾನ ಏರಿಕೆ, ಪ್ರವಾಹ ಮತ್ತು ಕಾಡ್ಗಿಚ್ಚಿನಂತಹ ಸಮಸ್ಯೆಗಳು ಹೆಚ್ಚಾಗಿದ್ದು, 2030ರ ವೇಳೆಗೆ ನಾವು ಪರಿಸರ ಮಾಲಿನ್ಯ ಕಡಿಮೆ ಮಾಡದಿದ್ದರೆ, ಭೂಮಿಯ ಉಷ್ಣತೆ ಬಹಳಷ್ಟು ಹೆಚ್ಚಾಗಿ ಇದರಿಂದ ಬಹಳಷ್ಟು ಹಾನಿಗಳಾಗುತ್ತವೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ತಿಳಿಸಿದೆ. ಈ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಗಾಗಿ ಸಕಲ ಜೀವ ಸಂಕುಲಗಳ ಉಳಿವಿಗಾಗಿ ಪರಿಸರ ಮತ್ತು ಭೂಮಿಯನ್ನು ರಕ್ಷಿಸಬೇಕು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಕುಡಿಯುವ ನೀರು, ಹಾಲಿನ ಪ್ಯಾಕೆಟ್​, ಆಹಾರ ಪದಾರ್ಥಗಳ ಪ್ಯಾಕೆಟ್​, ಮದ್ಯದ ಪ್ಯಾಕೆಟ್​ಗಳು, ಅಡುಗೆ ಎಣ್ಣೆಯ ಪ್ಯಾಕೆಟ್​, ಚಾಕ್ಲೆಟ್​, ಪಾನ್​, ಗುಟ್ಖಾ, ಮಕ್ಕಳು ತಿನ್ನುವ ತಿಂಡಿಗಳು ಎಲ್ಲವೂ ಪ್ಲಾಸ್ಟಿಕ್​ನಿಂದ ಪ್ಯಾಕ್​ ಮಾಡಿದವುಗಳಾಗಿದ್ದು, ಇವುಗಳನ್ನು ಸೇವನೆ ಮಾಡುವ ಮನುಷ್ಯರು ಪ್ರತಿ ದಿನವು ತಮ್ಮ ಹೊಟ್ಟೆಗೆ ವಿಷ ಸೇರಿಸಿಕೊಳ್ಳುವಂತಾಗಿದೆ. ಸರ್ಕಾರಗಳು ಕೂಡಲೇ ಪ್ಲಾಸ್ಟಿಕ್​ ಉತ್ಪಾದನೆ ಮಾಡುವ ಕಾರ್ಖಾನೆಗಳ ಪರವಾನಗಿ ರದ್ದು ಮಾಡಿ ಉತ್ಪಾದನೆಗೆ ಕಡಿವಾಣ ಹಾಕಿ ಮನುಕುಲದ ರಕ್ಷಣೆಗೆಮುಂದಾಗಬೇಕು ಎಂದರು.

ಕೆಂಗಲ್​ ಹನುಮಂತಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಮ್ಯಾಥ್ಯೂಸ್​ ಸ್ವಾಗತಿಸಿದರೆ, ಉಪಪ್ರಾಂಶುಪಾಲ ಪ್ರಸನ್ನಕುಮಾರ್​ ವಂದಿಸಿದರು.ನ್ಯಾಯಾಧೀಶರಾದ ಎಂ.ಮಂಜು, ಕೆ.ಶಮಿದಾ, ಉರಿಗಾಂ ಪೊಲೀಸ್​ ಠಾಣೆ ವೃತ್ತ ನಿರೀಕ್ಷಕ ಮಾರ್ಕಂಡಯ್ಯ,

ಪಿಎಸ್​ಐ ರಾಜೇಶ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net