ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪ್ರಕರಣದಲ್ಲಿ ತಾಯಿ ಸಾವು, ಮಗ ಪಾರು

28cmy3
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮಿಂಡಿಗಲ್ ಕ್ರಾಸ್ ಸಮೀಪ ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಅಪಘಾತ ಪ್ರಕರಣದಲ್ಲಿ ತಾಯಿ ಮೃತಪಟ್ಟಿದ್ದು ಮಗ ಅಪಾಯದಿಂದ ಪಾರಾಗಿದ್ದಾನೆ.
ಮೂಗಲಮರಿಯ ದೊಡ್ಡಯಲ್ಲಪ್ಪರ ಪತ್ನಿ ಮುನಿಲಕ್ಷ್ಮಿ (39) ಮೃತೆ. ದ್ವಿಚಕ್ರವಾಹನದಲ್ಲಿ ಮೂಗಲಮರಿಯಿಂದ ಮಿಂಡಿಗಲ್ ಮಾರ್ಗದ ಮೂಲಕ ಬಟ್ಲಹಳ್ಳಿಯ ಬ್ಯಾಂಕ್‌ಗೆ ಮಗ ವೆಂಕಟೇಶ್ ನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಇದೇ ವೇಳೆ ಬಟ್ಲಹಳ್ಳಿಯಿಂದ ಚಿಂತಾಮಣಿಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಬಸ್ ಅತಿ ವೇಗದ ಚಾಲನೆಯಲ್ಲಿ ನಿಯಂತ್ರಣ ಕಳೆದುಕೊಂಡ ಸಂದರ್ಭದಲ್ಲಿ ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಕೆಂಚರ‍್ಲಹಳ್ಳಿ ಪೊಲೀಸ್ ಇನ್ಸ್ಪಕ್ಟರ್ ವೆಂಕಟರಾಮಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿಂತಾಮಣಿ ತಾಲೂಕಿನ ಕೆಂಚರ‍್ಲಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net