

ಚಿಕ್ಕಬಳ್ಳಾಪುರ: ಶಸ್ತ್ರ ಚಿಕಿತ್ಸೆ ವೇಳೆ ನೀಡಿದ ರಕ್ತದ ಗುಂಪು ಅದಲು ಬದಲಾದ ಕಾರಣ ಬಾಣಂತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಮುಂಭಾಗಲ್ಲಿ ಶವವಿರಿಸಿ ಪ್ರತಿಭಟಿಸಿದರು.
ಗೌರಿಬಿದನೂತು ತಾಲ್ಲೂಕಿನ ಪುಲಗಾನಹಳ್ಳಿ ಗ್ರಾಮದ ಭಾಗ್ಯಮ್ಮ(30) ಮೃತ ದುರ್ದೈವಿ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಕೆಯನ್ನು ಸಮೀಪದ ಅಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಹಿಳೆ ವಿಪರೀತ ಕೆಮ್ಮು, ಜ್ವರ ಹಾಗೂ ನೆಗಡಿಯಿಂದ ಮಹಿಳೆ ಬಳಲುತ್ತಿದ್ದಳು. ಸೋಮವಾರ ನೋವು ಹೆಚ್ಚಾದ ಹಿನ್ನಲೆಯಲ್ಲಿ ಮಧ್ಯರಾತ್ರಿ 1 ಗಂಟೆ ನಂತರ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ.
ಈ ಮೊದಲು ಅಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾಗ ಆಕೆಯ ರಕ್ತದ ಗುಂಪು B+ ಎಂದು ದಾಖಲಿಸಲಾಗಿತ್ತು. ಆದರೆ ಇಲ್ಲಿ ಸಿಸೇರಿಯನ್ ಮಾಡಿದ ಬಳಿಕ ರಕ್ತ ಸ್ರಾವ ಹೆಚ್ಚಾದಾಗ ಮತ್ತೆ ಆಕೆಯ ರಕ್ತ ಮರುಪರೀಕ್ಷೆ ಮಾಡಿದಾಗ ಆಕೆಯ ರಕ್ತದ ಗುಂಪುರ B- ಎಂದು ಕಂಡು ಬಂದಿದೆ. 0- ಹೊಂದಾಣಿಕೆಯಾಗಲಿದೆ ಎಂದು ರಕ್ತವನ್ನು ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿ ನೆಗೆಟೀವ್ ರಕ್ತ ದಾಸ್ತಾನು ಇಲ್ಲದ ಕಾರಣ ಕ್ರಾಸ್ ಮ್ಯಾಚ್ ಮಾಡಿ O- ರಕ್ತವನ್ನು ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಆಕೆಯನ್ನು ರವಾನಿಸಲಾಗಿದೆ. ಅಲ್ಲಿಯೂ ಸಹ ರಕ್ತ ಪರೀಕ್ಷೆಯಲ್ಲಿ B- ರಕ್ತ ನೀಡಿ ಚಿಕಿತ್ಸೆ ಮುಂದುವರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತ ಪಟ್ಟಿದ್ದಾರೆ.
*ಕುಟುಂಬಸ್ಥರ ಪ್ರತಿಭಟನೆ*
ಮಹಿಳೆಯ ಸಾವಿನಿಂದ ಕುಪಿತಗೊಂಡ ಕುಟುಂಬಸ್ಥರು ಶವವನ್ನು ಬೆಂಗಳೂರಿನ ವಾಪಸ್ ತಂದು ಇಲ್ಲಿನ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವವನ್ನಿಟ್ಟು ಪ್ರತಿಭಟಿಸಿದರು.
ಮನುಷ್ಯನ ರಕ್ತದ ಗುಂಪು ಏಕಾಏಕಿ ಬದಲಾಗಲು ಹೇಗೆ ಸಾಧ್ಯ?. ಹುಟ್ಟಿನಿಂದ ಸಾಯುವವರೆಗೂ ಒಂದೇ ರಕ್ತದ ಗುಂಪು ಇರುತ್ತದೆ. ಆದರೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಬಡ ಮಹಿಳೆಯನ್ನು ಬಲಿ ತೆಗೆದುಕೊಂಡಿದೆ. ಬಡವರ ಪ್ರಾಣಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಬೆಲೆಯಿಲ್ಲದಂತಾಗಿದೆ. ಇಲ್ಲಿ ಬದ್ಧತೆಯಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆದರೆ ಜಿಲ್ಲಾ ಆರೋಗ್ಯದ್ಯಾಧಿಕಾರಿ ಡಾ. ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಮನವಿನ ಸ್ವೀಕರಿಸಿ, ಈ ಬಗ್ಗೆ ಸಮಿತಿ ನಡೆಸಿ ಮರಣೋತ್ತರ ವರದಿ ಆಧಾರದ ಮೇಲೆ ಸೂಕ್ತ ಕ್ರಮ ಜರುಗಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಮೃತ ಮಹಿಳೆಯ ಪತಿಗೆ ಹೊರಗುತ್ತಿಗೆ ಆಧಾರದ ಮೇರೆಗೆ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಕೋಟ್ 1
ಕಳೆದ 9 ವರ್ಷದಲ್ಲಿ B+ ಇದ್ದ ರಕ್ತದ ಗುಂಪು ಏಕಾಏಕಿ B- ಎಂದು ಬಂದಿದೆ. ನಮ್ಮಲ್ಲಿ ಆ ರಕ್ತದ ಗುಂಪು ಲಭ್ಯವಿರಲಿಲ್ಲ. ತಕ್ಷಣದ ತುರ್ತು ಪರಿಸ್ಥಿತಿಯಲ್ಲಿ ಕ್ರಾಸ್ ಮ್ಯಾಚ್ ಮಾಡಿ ಮಹಿಳೆಗೆ o- ರಕ್ತ ನೀಡಿದ್ದೆವು. ಆದರೂ ರಕ್ತ ಸ್ರಾವ ನಿಲ್ಲದೆ ಇದ್ದಾಗ ಪರಿಸ್ಥಿತಿಯ ಗಂಭೀರತೆ ಅರಿತು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು, ಅಲ್ಲಿಯೂ ಸಹ ಬಿ ಎಂದು ಬಂದಿದೆ. ಆದರೆ, ಅಲ್ಲಿ ಬಾಣಂತಿ ಮಹಿಳೆ ಮೃತ ಪಟ್ಟಿದ್ದಾರೆ. B-ರಕ್ತ ಲಭ್ಯವಿದ್ದಿದ್ದರೆ ಮಹಿಳೆ ಉಳಿಸಬಹುದಿತ್ತು.ಇದು ಯಾವ ಪ್ರಯೋಗಾಲಯದ ಸಮಸ್ಯೆ ಎಂದು ತನಿಖೆ ಮೂಲಕ ತಿಳಿಯಬೇಕಾಗಿದೆ.
ಡಾ.ಶ್ವೇತಾ, ವೈದ್ಯಧಿಕಾರಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ.